ಮಡಿಕೇರಿ: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಆಪರೇಷನ್ ಕಮಲ ಮೂಲಕ ಗೆಲವು ಪಡೆದಿದೆ ಎಂದು ಉಸ್ತುವಾರಿ ಸಚಿವ ಭೋಸರಾಜು ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಬೇರೆ ಬಿಜೆಪಿಯ ಕುತಂತ್ರಗಳೇ ಬೇರೆ. ಅಸ್ಸಾಂನಲ್ಲಿ ಅಭ್ಯರ್ಥಿಗಳು ಎಲ್ಲಿಂದ ಬಂದವರು? ಅವರೇನು ಬಿಜೆಪಿ ಆರ್ ಎಸ್ ಎಸ್ ನಿಂದ ಬಂದವರೇ?ದೇಶದಲ್ಲಿ ಆಪರೇಷನ್ ಕಮಲ ಶುರು ಮಾಡಿದ್ದೇ ಬಿಜೆಪಿ. ಪಶ್ಚಿಮ ಬಂಗಾಳಕ್ಕೆ ಮೋದಿ, ಶಾ ಅವರು ಎಷ್ಟು ಬಾರಿ ಹೋದರು. ಆರು ತಿಂಗಳಿಂದ ಬಹುತೇಕ ಅಲ್ಲಿಯೇ ಇದ್ದರು. ಅಲ್ಲಿಯೇ ಇದ್ದು ಶಾ ಕುತಂತ್ರ ಮಾಡಿದರು. ಯುಪಿಯ ಐಎಎಸ್ ಅಧಿಕಾರಿಗಳನ್ನು ಪಶ್ಚಿಮ ಬಂಗಾಳಕ್ಕೆ ತಂದು ಹಾಕಿದರು. ಆ ಮೂಲಕ ಚುನಾವಣೆ ಗೆಲುವಿಗೆ ಕುತಂತ್ರಗಳನ್ನು ಮಾಡಿದರು ಎಂದು ಆರೋಪಿಸಿದರು.
ಬಾಗಲಕೋಟೆಯಲ್ಲಿ ಜನರು ನಮ್ಮ ಕೈಹಿಡಿದಿದ್ದಾರೆ. ಅಲ್ಲಿ ಎಲ್ಲ ಜಾತಿ ಧರ್ಮಗಳ ಮತದಾರರು ಸಾಕಷ್ಟು ಇದ್ದಾರೆ. ಅವರೆಲ್ಲರನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಕೆಲಸ ಮಾಡಿದೆವು. ಹೆಚ್ಚಿನ ಮತದಾರರಿರುವ ಬಾಗಲಕೋಟೆ ನಗರದಲ್ಲಿ ಹೆಚ್ಚು ಬಿಜೆಪಿ ಮತಗಳಿದ್ದವು. ಗ್ರಾಮಾಂತರದಲ್ಲಿ ನಮ್ಮ ಮತಗಳಿದ್ದವು. ಈ ಎಲ್ಲ ಕಾರಣಗಳಿಂದ ಸಾಕಷ್ಟು ಕೆಲಸ ಮಾಡಿದ್ದೆವು. ಮತದಾರರು ನಮ್ಮ ಪರವಾಗಿ ಆದೇಶ ನೀಡಿದ್ದಾರೆ ಎಂದರು.ಶೃಂಗೇರಿ ಕ್ಷೇತ್ರದ ಮರುಎಣಿಕೆಯಲ್ಲಿ ಬಿಜೆಪಿಯ ಜೀವರಾಜ್ ಗೆ ಗೆಲವು ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮೇಲೆ ಸಚಿವ ಭೋಸರಾಜ್ ದೂರಿದ್ದಾರೆ. ಅಂದು ಅದೇ ಅಧಿಕಾರಿಗಳು ಮತ ಎಣಿಕೆ ಮಾಡಿದ್ದರು. ಇಂದು ಅದೇ ಅಧಿಕಾರಿಗಳು ಮತ ಎಣಿಕೆ ಮಾಡಿದ್ದಾರೆ. ಅವರೆಲ್ಲರೂ ರಾಜ್ಯ ಚುನಾವಣಾ ಆಯೋಗದಿಂದ ನೇಮಕ ಆದವರೇ. ಅವರೇ ಏನೋ ಹೆಚ್ಚು ಕಡಿಮೆ ಮಾಡಿರಬಹುದು. ಆ ಅಭಿಪ್ರಾಯ ಈಗ ಕೇಳಿ ಬರುತ್ತಿದೆ. ಮತ ಎಣಿಕೆಯನ್ನು ಯಾವುದೇ ರಾಜಕೀಯ ಪಕ್ಷ ಮಾಡಲಾಗಲ್ಲ.
ಅಧಿಕಾರಿಗಳು ಯಾವುದೋ ತಪ್ಪನ್ನು ಅವತ್ತಾದರೂ ಮಾಡಿರಬಹುದು ಇಲ್ಲ ಇವತ್ತಾದರೂ ಮಾಡಿರಬಹುದು ಎಂದು ಆರೋಪಿಸಿದರು.ಕೇರಳದಲ್ಲಿ ಯುಡಿಎಫ್ ಗೆಲುವು ನಮ್ಮ ನಿರೀಕ್ಷೆ ಇತ್ತು. ಚುನಾವಣೆಗೂ ಮುನ್ನ ಜನಾಭಿಪ್ರಾಯವೂ ಹಾಗೆ ಇತ್ತು. ಅಲ್ಲಿನ ಮುಖ್ಯಮಂತ್ರಿ ವಿರುದ್ಧವೂ ಜನಾಭಿಪ್ರಾಯವಿತ್ತು. ಆರು ತಿಂಗಳಿಂದ ಎಲ್ಲ ಯೋಜನೆ ರೂಪಿಸಿದ್ದೆವು. ಆಡಳಿತ ವಿರೋಧಿ ಅಲೆ ಅಲ್ಲಿ ಇತ್ತು. ಈ ಎಲ್ಲ ಕಾರಣಗಳಿಂದ ನಾವು ಸಾಕಷ್ಟು ಕೆಲಸ ಮಾಡಿದ್ದೆವು. ಅದರಂತೆ ಅಲ್ಲಿ ನಾವು ಗೆದ್ದಿದ್ದೇವೆ. ನನಗೆ ಕೂಡ ಎರಡು ಜಿಲ್ಲೆಗಳ ಜವಾಬ್ದಾರಿ ಇತ್ತು. ಅಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಜನಪ್ರಿಯತೆ ಹೆಚ್ಚಿದೆ ಎಂದು ಸಚಿವರು ಹೇಳಿದರು.