ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಜನಪ್ರತಿನಿಧಿಗಳ ಜೊತೆಗೆ ಜನರ ಸಹಭಾಗಿತ್ವವೂ ಪ್ರಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದ್ದಾರೆ.
ಮಡಿಕೇರಿ: ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಜನಪ್ರತಿನಿಧಿಗಳ ಜೊತೆಗೆ ಜನರ ಸಹಭಾಗಿತ್ವವೂ ಪ್ರಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರ ನೇತೃತ್ವದಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮತ್ತು ಜನರ ಪಾಲ್ಗೊಳ್ಳುವಿಕೆ ಕುರಿತು ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಯೋಜನೆ ರೂಪಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು, ಆ ದಿಸೆಯಲ್ಲಿ ಎಲ್ಲರ ಜೊತೆ ಚರ್ಚಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲರು ಮಾತನಾಡಿ, ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರ ಬೇಡಿಕೆಗಳಿಗುಣವಾಗಿ ಜನರ ಶ್ರೇಯೋಭಿವೃದ್ಧಿಯ ಕ್ರಿಯಾ ಯೋಜನೆ ರೂಪಿಸಿ ಜನರ ಜೀವನಮಟ್ಟ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಉನ್ನತ ಮಟ್ಟದ ಸಮಿತಿಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಿಲ್ಲಾ ಮಟ್ಟದ ಯೋಜನೆಗಳನ್ನು ಏಕೀಕರಿಸುತ್ತದೆ ಎಂದರು.
ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೆ ಸಾಕಷ್ಟು ಶ್ರಮ ಪಡುತ್ತಾರೆ. ಅವರಿಗೆ ಉತ್ತಮ ಸ್ಥಾನಮಾನ ದೊರಕಬೇಕು. ಆ ನಿಟ್ಟಿನಲ್ಲಿ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಮೂಲಕ ಮಹಿಳೆಯರ ಸಬಲೀಕರಣ ಮತ್ತು ಸ್ಥಾನಮಾನವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಆ ಮೂಲಕ ಮಹಿಳೆಯರನ್ನು ಮತ್ತಷ್ಟು ಗೌರವದಿಂದ ಕಾಣುವ ವ್ಯವಸ್ಥೆಯಾಗುತ್ತದೆ ಎಂದು ಹೇಳಿದರು.
ಗ್ರಾಪಂ ಗ್ರಾಮ ಸರ್ಕಾರವಾಗಿ, ನಗರಸಭೆ, ಪುರಸಭೆ, ಜಿಪಂ ಸ್ಥಳೀಯ ಸರ್ಕಾರವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರಕಿಸಿಕೊಡಬೇಕು ಎಂದು ಹೇಳಿದರು.
ಬಳಿಕ ದ್ವನಿಗೂಡಿಸಿದ ಸಚಿವ ಎನ್.ಎಸ್. ಭೋಸರಾಜು ಯೋಜನೆಯ ಅನುಷ್ಠಾನ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತಂದರೆ ಸ್ಥಳೀಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆಯು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು ಎಂದು ಹೇಳಿದರು.ನಗರಸಭೆ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ನಗರಸಭೆಯಲ್ಲಿ ಶೇ.70ರಷ್ಟು ನೌಕರರ ಸಂಖ್ಯೆ ಕಡಿಮೆ ಇದ್ದು, ಶೀಘ್ರ ಹುದ್ದೆಗಳ ಭರ್ತಿಗೆ ಗಮನಹರಿಸಬೇಕು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇವುಗಳನ್ನು ನಿಯಂತ್ರಿಸಬೇಕು. ರಸ್ತೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್ ಮಾಹಿತಿ ನೀಡಿ, ಈಗಾಗಲೇ ಯೋಜನೆಯ ಕರಡು ಪ್ರತಿ ಸಿದ್ಧಪಡಿಸಲಾಗಿದೆ ಎಂದರು.
ಸಮಿತಿ ಉಪಾಧ್ಯಕ್ಷ ಪಾಟೀಲ ಮಾತನಾಡಿ, ಅಧಿಕಾರ ವಿಕೇಂದ್ರಿಕರಣದ ಹಿನ್ನೆಲೆಯಲ್ಲಿ ನಗರಸಭೆ, ಪುರಸಭೆ ವ್ಯಾಪ್ತಿಯ ಪ್ರತಿ ವಾರ್ಡ್ ಮಟ್ಟದಲ್ಲಿ ಜೂ.15ರೊಳಗಾಗಿ ವಾರ್ಡ್ ಸಮಿತಿ ಹಾಗೂ ನೆರೆಹೊರೆ ಎಂಬ ಗುಂಪು ರಚಿಸಬೇಕು. ಈ ಬಗ್ಗೆ ಮತ್ತೊಂದು ಸಭೆಯಲ್ಲಿ ಮಾಹಿತಿ ಪಡೆಯಲಾಗುವುದು ಎಂದರು.
ನಗರಸಭೆಯ ಮತ್ತೊಬ್ಬ ಸದಸ್ಯ ಮನ್ಸೂರ್ ಮಾತನಾಡಿ, ಅಧಿಕಾರ ವಿಕೇಂದ್ರಿಕರಣದ ಬಗ್ಗೆ ಯಾವುದೇ ಯೋಜನೆ ನಡೆದಿಲ್ಲ ಎಂದರು.
ಸಮಿತಿ ಉಪಾಧ್ಯಕ್ಷರು ಮಾತನಾಡಿ, ಕೊಡಗಿನಲ್ಲಿ ಈ ಯೋಜನೆ ಶೀಘ್ರದಲ್ಲಿ ನಡೆಯಬೇಕು. ಇದು ಮಡಿಕೇರಿಯಿಂದ ಪ್ರಾರಂಭವಾಗಿ ಇಡೀ ಜಿಲ್ಲೆಗೆ ಮಾದರಿಯಾಗಲಿ. ಇದನ್ನು ಯಶಸ್ವಿಯಾಗಿ ನಡೆಸಬೇಕು ಎಂದರು.
ಜಿಪಂ ಯೋಜನಾ ನಿರ್ದೇಶಕ ಅಬ್ದುಲ್ ನಬಿ ಮಾತನಾಡಿ, ಈಗಾಗಲೇ ಯೋಜನೆ ತಯಾರಿ ಬಗ್ಗೆ ಕಾರ್ಯಾಗಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾ ಗ್ಯಾರಂಟಿ ಯೋಜನಾ ಅಧ್ಯಕ್ಷ ಧರ್ಮಜ ಉತ್ತಪ್ಪ, ರಾಜ್ಯ ವಿಕೇಂದ್ರಿಕರಣ ಸಲಹೆಗಾರ ಡಾ. ಕೆಂಪೇಗೌಡ, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಎಸ್‌ಪಿ ಆರ್.ಎನ್. ಬಿಂದುಮಣಿ, ನಗರಸಭೆ ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.