ಬಿಜೆಪಿ ಮುಖಂಡ ಮಣಿಕಂಠನ್ ಕಂದಸ್ವಾಮಿ ಮಾಹಿತಿ
ಕನ್ನಡಪ್ರಭ ವಾರ್ತೆ, ಕೊಪ್ಪ೨೦೨೪ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಡಿ.ಎನ್. ಜೀವರಾಜ್ ಮತ್ತು ಜೆಡಿಎಸ್‌ನ ಸುಧಾಕರ್ ಶೆಟ್ಟಿಯವರು ಪಾಲ್ಗೊಳ್ಳುವ ಸಮಾವೇಶ ಏ.೦೮ರ ಸೋಮವಾರ ಜಯಪುರದಲ್ಲಿ ನಡೆಯಲಿದೆ ಎಂದು ಬಿಜೆಪಿ ಮುಖಂಡ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು.
ಈ ಕುರಿತು ಸುದ್ಧಿಗೋಷ್ಠಿ ನಡೆಸಿದ ಅವರು ದೇಶದ ರಕ್ಷಣಾ ವ್ಯವಸ್ಥೆಯನ್ನು ವಿಶ್ವ ಮಟ್ಟದಲ್ಲಿ ಬಲಿಷ್ಠಗೊಳಿಸಿದಂತಹ, ಆಯುಷ್ಮಾನ್ ನಂತಹ ಯೋಜನೆಗಳ ಮೂಲಕ ಬಡವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ, ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಜಲಜೀವನ್ ಯೋಜನೆ ನೀಡಿದ, ಸ್ವಾತಂತ್ರ‍್ಯದ ೬೭ ವರ್ಷಗಳ ಬಳಿಕವೂ ಭಾರತದ ಬಹುಪಾಲು ಜನಸಂಖ್ಯೆ ಬ್ಯಾಂಕಿಂಗ್ ಸೌಲಭ್ಯಕ್ಕೆ ಒಳಪಟ್ಟಿರಲಿಲ್ಲ ಅಂದರೆ ಈ ಜನರಿಗೆ ಉಳಿತಾಯದ ಅವಕಾಶವಾಗಲೀ, ಸಾಂಸ್ಥಿಕ ಸಾಲದ ಅವಕಾಶವಾಗಲೀ ಲಭ್ಯವಾಗುತ್ತಿರಲಿಲ್ಲ.ಅದಕ್ಕಾಗಿ ಜನಧನ್ ಯೋಜನೆ ಮೂಲಕ ಪ್ರತಿ ದೇಶವಾಸಿಗಳು ಬ್ಯಾಂಕ್ ನಲ್ಲಿ ಖಾತೆ ತೆರೆದು ಡಿಜಿಟಲ್ ವ್ಯವಹಾರದಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದ, ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಬೇಟಿ ಬಚಾವೋ ಬೇಟಿ ಪಡಾವೋ ನಂತಹ ಯೋಜನೆಗಳನ್ನು ಆರಂಭಿಸಿದ, ವಿಜ್ಞಾನ ಜಗತ್ತಿನಲ್ಲಿ ಭಾರತ ಇನ್ನೂ ನುರಿತವಾಗಲು ಹೆಚ್ಚು ಆದ್ಯತೆ ನೀಡುವಂತ ಅನೇಕ ಯೋಜನೆಗಳನ್ನು ನೀಡಿದ, ಸ್ವಚ್ಛ ಭಾರತ್ ಮಿಷನ್, ಪಿಎಂ ಮುದ್ರಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ ಮತ್ತು ಮೇಕ್ ಇನ್ ಇಂಡಿಯಾ ಸೇರಿದಂತೆ ಅನೇಕ ಕಲ್ಯಾಣ ಯೋಜನೆ ಪ್ರಾರಂಭಿಸಿದ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಈ ದೇಶದ ಪ್ರಧಾನಿಯಾಗಿ ಮಾಡಲು ಶ್ರಮಿಸುವುದಾಗಿ ಪರಸ್ಪರ ಎರಡು ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಒಟ್ಟಾಗಿ ಚುನಾವಣೆ ಮಾಡಲಾಗುವುದು ಎಂದು ಮಣಿಕಂಠನ್ ಕಂದಸ್ವಾಮಿ ಪತ್ರಿಕೆಗೆ ತಿಳಿಸಿದರು .ಸಭೆಯಲ್ಲಿ ಬಿಜೆಪಿ ಸಂತೋಷ್ , ಹಾಲಪ್ಪ , ನಟರಾಜ್ ಮತ್ತು ಜೆಡಿಎಸ್ ನ ಪ್ರಕಾಶ್ ಆನ್ಮನೆ , ಉದಯ , ಶಾಂತರಾಜ್ ಹಾಗೂ ಇತರರಿದ್ದರು.