ರಾಮನಗರ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅಮೆರಿಕಾದಲ್ಲಿ ನೀಡಿದ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದವರ ಮೀಸಲಾತಿ ತೆಗೆದು ಹಾಕುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ವಿದೇಶದಲ್ಲಿ ಮೀಸಲಾತಿ ರದ್ಧತಿ ಬಗ್ಗೆ ಹೇಳಿಕೆ ನೀಡಿದ ರಾಹುಲ್ ಗಾಂಧಿ ಪ್ರತಿಕೃತಿ ದಹಿಸಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ನೀಡದಿದ್ದಾಗ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. ಕೊನೆಗೆ ಕಾರ್ಯಕರ್ತರು ರಾಹುಲ್ ಗಾಂಧಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ರಾಹುಲ್ ಗಾಂಧಿ ವಿದೇಶಿ ಪ್ರಯಾಣದ ಮಾಡಿದಾಗಲೆಲ್ಲಾ ದೇಶದ ಮಾನ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸಂವಿಧಾನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಲ್ಪಿಸಿಕೊಟ್ಟಿರುವ ಮೀಸಲಾತಿಯನ್ನು ತೆಗೆದು ಹಾಕುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವೂ ದಲಿತ ಸಮುದಾಯವನ್ನು ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತದೆ. ದಲಿತರ ಅಭಿವೃದ್ಧಿಗೆ ಸರ್ಕಾರ ಇದೆ ಎನ್ನುವ ಕಾಂಗ್ರೆಸ್, ಅವರದ್ದೇ ಪಕ್ಷದ ವರಿಷ್ಠ ವಿದೇಶದಲ್ಲಿ ಪ್ರತಿ ಬಾರಿ ದೇಶದ ವಿರುದ್ಧ ಮಾತನಾಡುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದನ್ನು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಪಕ್ಷವೊಂದು ದಲಿತರ ಪಾಲಿಗೆ ಉರಿಯುವ ಮನೆಯಾಗಿದೆ. ಕಾಂಗ್ರೆಸ್ ಸ್ವಾತಂತ್ರ್ಯಪೂರ್ವದಿಂದಲೂ ದಲಿತರನ್ನು ಮತ ಬ್ಯಾಂಕ್ ಆಗಿಸಿಕೊಂಡು ಒಂದು ಕೈಯಲ್ಲಿ ಕೊಡುವ ನಾಟಕವಾಡಿ ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾರೋಹಳ್ಳಿ ಚಂದ್ರು, ರಾಮನಗರ ನಗರ ಮಂಡಲ ಬಿಜೆಪಿ ಕಾರ್ಯದರ್ಶಿ ಕಾಳಯ್ಯ, ಮುಖಂಡರಾದ ಸಿಂಗ್ರಯ್ಯ, ಕುಮಾರ್, ರುದ್ರದೇವರು, ಚಂದ್ರಶೇಖರ್ ರೆಡ್ಡಿ, ರುದ್ರದೇವರು, ಮುರಳೀಧರ್ ಕಿಶನ್ , ಜೆಡಿಎಸ್ ಮುಖಂಡರಾದ ವಾಸುನಾಯಕ್, ಜಯಕುಮಾರ್, ಕೆಂಪರಾಜು ಇತರರು ಭಾಗವಹಿಸಿದ್ದರು.12ಕೆಆರ್ ಎಂಎನ್ 7.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.