ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಭೂಗಳ್ಳರಿಂದ ಸರ್ಕಾರಿ ಜಮೀನು ಕಬಳಿಕೆ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬರುವ ಆಗಸ್ಟ್ 1ರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ, ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಇಲ್ಲಿನ ಗಂಗಾಧರಪುರದ ಸರ್ವೇ ನಂ.17ರ ಸರ್ಕಾರಿ ಕುಂಟೆ 2.04 ಎಕರೆ ಜಾಗವಿದೆ. ಈ ಜಾಗವನ್ನು ಕುಂಟೆಯಾಗಿಯೇ ಉಳಿಸಿ ಅಭಿವೃದ್ಧಿಪಡಿಸಬೇಕು. ಕಸಬಾ ಹೋಬಳಿ ಅರೇಹಳ್ಳಿಗುಡ್ಡದಹಳ್ಳಿಯ ಸರ್ವೇ ನಂಬರ್ 57ರ ಸರ್ಕಾರಿ ಗೋಮಾಳದ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಯತ್ನಿಸಲಾಗುತ್ತಿದೆ. ರೋಜಿಪುರದ ಸರ್ವೇ ನಂ.93ರ 23 ಗುಂಟೆ ಜಾಗದಲ್ಲಿ ಕಾಮಗಾರಿ ನಡೆಸುತ್ತಿರುವ ಖಾಸಗಿಯವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಗಂಗಾಧರಪುರ ಸರ್ವೇ ನಂಬರ್ 124ರಲ್ಲಿನ ಸ್ಮಶಾನದ ಜಾಗದಲ್ಲಿರುವ ಅನಧಿಕೃತ ಅಂಗಡಿ ತೆರವುಗೊಳಿಸಬೇಕು ಎಂದು ಹಲವು ದೂರು ನೀಡಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ವಿರುದ್ದ ಕಿಡಿ:ಕಳೆದ ಜನವರಿ 26 ರಂದು ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡುವುದಾಗಿ ಘೋಷಿಸಿದಾಗ ತಹಸೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಶೀಘ್ರದಲ್ಲೇ ಸಭೆ ನಡೆಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಸಭೆ ನಡೆಸಿಲ್ಲ. ಭೂಗಳ್ಳರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, ರಾಜ್ಯ ಮುಖಂಡ ಪಿ.ವಾಸು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ತಾಲೂಕು ಉಪಾಧ್ಯಕ್ಷ ಅಂಬರೀಶ್, ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರರೆಡ್ಡಿ, ಸಾಸಲು ಹೋಬಳಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಶಿವಶಂಕರಪ್ಪ ಇತರರಿದ್ದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿರುವ ಅಕ್ರಮ ಭೂಗಳ್ಳತನ ಪ್ರಕರಣಗಳ ವಿರುದ್ದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದರು.