ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಿಎಲ್‌ಡಿಇ ಡೀಮ್ಡ್ ವಿವಿ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊನ್ನೆಯಷ್ಟೆ ಬೈಕ್ ಅಪಘಾತಕ್ಕೀಡಾಗಿದ್ದ ನಗರ ನಿವಾಸಿ ಬಲರಾಮ ಬಾಗಲಕೋಟೆ ಕುಟುಂಬಸ್ಥರು ಬಲರಾಮನ ಅಂಗಾಂಗ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಲರಾಮನ ಅಂಗಾಂಗ ಪ್ರಕರಣದಲ್ಲಿ ಶ್ರಮ ವಹಿಸಿದ ಆಸ್ಪತ್ರೆ ವೈದ್ಯರು, ಸಿಬ್ಬಂದಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಅಭಿನಂದನೆಗಳನ್ನು ತಿಳಿಸಿದರು.ಆಸ್ಟ್ರೇಲಿಯಾ, ಸ್ಪೇನ್, ಬೆಲ್ಜಿಯಂ, ಸಿಂಗಪೂರ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಅಂಗಾಂಗ ದಾನದ ಜಾಗೃತಿ ಹೆಚ್ಚಿಗೆ ಇದೆ. ಅದರಂತೆ ಭಾರತದಲ್ಲೂ ಇದರ ಜಾಗೃತಿ ಹೆಚ್ಚೆಚ್ಚು ಆಗಬೇಕಿದೆ. ಮೆದುಳು ನಿಷ್ಕ್ರಿಯಗೊಂಡ ಬಳಿಕ ಅಂಗಾಂಗ ದಾನ ಮಾಡುವ ಮೂಲಕ ಹಲವು ಜೀವಿಗಳಿಗೆ ಮತ್ತೊಮ್ಮೆ ಜೀವದಾನ ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ನಾನು ಸಹ ಬೆಂಬಲಿಸುತ್ತಿದ್ದು, ಎಲ್ಲರೂ ಅಂಗಾಂಗ ದಾನಕ್ಕೆ ಮುಂದಾಗಬೇಕು. ಈ ಕುರಿತು ದೇಶದೆಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು. ಅಂಗಾಂಗ ದಾನ ಮಾಡಿದರೇ ನಾವು ಜೀವಹೋದ ಮೇಲೂ ಬದುಕಿದ್ದೇವೆ. ಬೇರೆಯವರಿಗೆ ಜೀವನ ಕೊಟ್ಟಿದ್ದೇವೆ ಎಂಬುವುದನ್ನು ಅರಿಯಬೇಕು. ಇದು ನಿಜವಾಗಿಯೂ ನಾವು ಸತ್ತ ಮೇಲೂ ಬದುಕುವುದು ಹಾಗೂ ಹಲವು ಜನರಿಗೆ ಬದುಕಲು ಅವಕಾಶ ಕೊಡುವ ಮಹತ್ವದ ಕಾರ್ಯವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ಹೆಚ್ಚಿನ ಬೆಂಬಲ ನೀಡಬೇಕೆಂದು ಬಿಎಲ್‌ಡಿಇ ಸಂಸ್ಥೆಯಿಂದ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಡಾ.ಅರುಣ ಇನಾಮದಾರ, ಡಾ.ಎಂ.ಜಯರಾಜ, ಡಾ.ತೇಜಶ್ವಿನಿ ವಲ್ಲಭ, ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ.ಎಸ್.ಬಿ.ಪಾಟೀಲ ಇದ್ದರು.ಅಂಗಾಂಗ ದಾನಿ ಬಲರಾಮ ಕುಟುಂಬಕ್ಕೆ ಉದ್ಯೋಗ: ಎಂಬಿಪಾ ಭರವಸೆಅಂಗಾಂಗ ದಾನ ಮಾಡಿದ ಬಲರಾಮನ ಕುಟುಂಬಸ್ಥರಿಗೆ ಬಿಎಲ್‌ಡಿಇ ಸಂಸ್ಥೆಯಿಂದ ಹೆಲ್ತ್‌ಕಾರ್ಡ್ ಕೊಡಲಾಯಿತು. ಸಂಸ್ಥೆಯಿಂದ ಕೊಡಮಾಡುವ ಕುಟುಂಬದ ಆರೋಗ್ಯ ಕಾರ್ಡ್‌ನ್ನು ವಿತರಿಸಿದ್ದಲ್ಲದೇ ಕುಟುಂಬಸ್ಥರ ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು. ಬಿಎಲ್‌ಡಿಇ ಸಂಸ್ಥೆಯಲ್ಲೇ ಅವರ ಕುಟುಂಬಸ್ಥರಿಗೆ ಉದ್ಯೋಗ ಕೊಡುವ ಕೆಲಸ ಮಾಡಲಾಗುವುದು ಎಂದು ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಭರವಸೆ ನೀಡಿದರು.
ಕೇಂದ್ರದ ಪ್ರಧಾನಿಗಳಿಗೆ, ಕೇಂದ್ರ ಆರೋಗ್ಯ ಸಚಿವರಿಗೆ, ರಾಜ್ಯದ ಸಿಎಂಗೆ, ರಾಜ್ಯ ಆರೋಗ್ಯ ಸಚಿವರಿಗೆ ಸೇರಿದಂತೆ ಸಂಬಂಧಿತ ಎಲ್ಲರಿಗೂ ಬಿಎಲ್‌ಡಿಇ ಸಂಸ್ಥೆಯ ಮೂಲಕ ಪತ್ರ ಬರೆದು ಹೆಚ್ಚಿನ ಪ್ರಮಾಣದಲ್ಲಿ ಅಂಗಾಂಗ ದಾನಕ್ಕೆ ಜಾಗೃತಿ ಮೂಡಿಸುವುದು ಹಾಗೂ ಜನರನ್ನು ಪ್ರೇರೇಪಿಸುವ ಕೆಲಸ ಕೈಗೊಳ್ಳುವಂತೆ ಮನವಿ ಮಾಡಲಾಗುವುದು.