ಕನ್ನಡಪ್ರಭ ವಾರ್ತೆ ಲೋಕಾಪುರ
ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಕ್ರಿಯಾಮೂರ್ತಿಗಳ ನೇತೃತ್ವದಲ್ಲಿ ಅರ್ಚಕರ ಬಳಗ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಂತೆಯೇ ಸರತಿ ಸಾಲಿನಲ್ಲಿ ಭಕ್ತರು ಲೋಕನಾಥ ದರ್ಶನ ಪಡೆದು ಧನ್ಯರಾದರು. ರಥವನ್ನು ವಿವಿಧ ಬಣ್ಣ ಬಣ್ಣದ ಬಟ್ಟೆಗಳಿಂದ, ರುದ್ರಾಕ್ಷಿ ಮಾಲೆ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ಈ ವರ್ಷ ರಥಕ್ಕೆ ಹೊಸ ಗಾಲಿ ಜೋಡಿಸಲಾಗಿತ್ತು.
ರಥಕ್ಕೆ ಕಳಾಸರೋಹಣ ತುದಿಯಲ್ಲಿ ವರ್ಣಾಲಂಕಾರ ಧ್ವಜ ಕಟ್ಟಲಾಗುತ್ತದೆ. ಬಳಿಕ ನವರತ್ನ ಹಾಗೂ ಫಲ ಪುಷ್ಪಾಲಂಕಾರ, ಹೂವಿನಿಂದ ಕಂಗೊಳಿಸುವ ಶ್ರೀ ಲೋಕನಾಥ ವಿಗ್ರಹವನ್ನು ರಥದಲ್ಲಿರಿಸಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಲೋಕೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಹಾದೇವ ಜೈಕಾರ ಹಾಕುತ್ತಾ ರಥ ಎಳೆದು ಪುನೀತರಾದರು.ಲೋಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ರಥ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ರಸ್ತೆಯ ಮೇಲೆ ಸಾಗುತ್ತಿದ್ದಂತೆಯೇ ಭಕ್ತರು ಬಾಳೆಹಣ್ಣು, ಉತ್ತತ್ತಿ, ಹೂವು ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಹಣ್ಣು, ನಾಣ್ಯಗಳನ್ನು ರಥದತ್ತ ಎಸೆದು ಹರಕೆ ತೀರಿಸಿದರು. ರಥೋತ್ಸವ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ ಮರಳಿ ದೇವಸ್ಥಾನಕ್ಕೆ ಬಂದು ಸೇರಿತು.
ಜಾತ್ರೆಯ ನಿಮಿತ್ತ ದೇವಸ್ಥಾನವನ್ನು ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ನೇತೃತ್ವ ವಹಿಸಿದ್ದರು. ಸ್ಥಳೀಯ ಗಣ್ಯರಾದ ಡಾ. ಕೆ.ಎಲ್. ಉದಪುಡಿ, ಅವರ ಸಹಕಾರದೊಂದಿಗೆ ಜಾತ್ರಾ ಕಮೀಟಿ ಅಧ್ಯಕ್ಷ ಕಿರಣರಾವ ದೇಸಾಯಿ ಇವರ ನೇತೃತ್ವದಲ್ಲಿ ರಥೋತ್ಸವ ನೆರವೇರಿತು. ಸಿಪಿಐ ಮಹಾದೇವ ಸಿರಹಟ್ಟಿ ಹಾಗೂ ಠಾಣಾಧಿಕಾರಿ ಕೆ.ಬಿ. ಜಕ್ಕನ್ನವರ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪಟ್ಟಣದ ವಿವಿಧಡೆ ಗಣ್ಯರ ಕಟೌಟ್‌ಗಳ ಭರಾಟೆ ಎದ್ದು ಕಾಣುತ್ತಿತ್ತು.
ಮುಗಿಲು ಮುಟ್ಟುವ ಘೋಷಣೆ: ರಥ ಮುಂದೆ ಸಾಗುತ್ತಿದ್ದಂತೆ ಭಾವಪರವಶಗೊಂಡ ಭಕ್ತರು ಲೋಕೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಾಹದೇವಿ ಜೈ ಶಂಕರ ಎನ್ನುತ್ತ ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಹರಕೆ ಲೋಕನಾಥನಿಗೆ ಅರ್ಪಿಸಿದರು. ರಥವು ರಾಮಲಿಂಗೇಶ್ವರ ದೇವಸ್ಥಾನಕ್ಕೆ ಬಂದು ನಿಂತಾಗ ಕಂಡು ಬರುವ ದೃಶ್ಯ ಕಣ್ಮನ ಸೆಳೆಯಿತು.
ಜಾತ್ರೆಯಲ್ಲಿ ಮುಖಂಡರಾದ ಡಾ. ಕೆ.ಎಲ್. ಉದಪುಡಿ, ಲೋಕಣ್ಣ ಕತ್ತಿ, ಶಿವಾನಂದ ಉದಪುಡಿ, ಪ್ರಕಾಶ ಚುಳಕಿ, ವಿ.ಎಂ. ತೆಗ್ಗಿ, ಎಂ.ಎ. ವಿರಕ್ತಮಠ, ಲೋಕಣ್ಣ ಕೊಪ್ಪದ, ಷಣ್ಮುಖಪ್ಪ ಕೋಲ್ಹಾರ, ಗುರುರಾಜ ಉದಪುಡಿ, ಬಸವರಾಜ ಕಾತರಕಿ, ಕಾಶಿನಾಥ ಹುಡೇದ, ಆನಂದ ಹಿರೇಮಠ, ರಮೇಶ ಪಂಚಕಟ್ಟಿಮಠ, ಈಶ್ವರ ಹವಳಖೋಡ, ಸದಾಶಿವ ಉದಪುಡಿ, ರಫೀಕ್ ಬೈರಕದಾರ, ಪವನ ಉದಪುಡಿ, ಮಾನಿಂಗಪ್ಪ ಹುಂಡೇಕಾರ, ಹೊಳಬಸು ಕಾಜಗಾರ, ಅರ್ಜುನ ಕೊಪ್ಪದ, ಗುಲಾಬಸಾಬ ಅತ್ತಾರ, ಎಸ್.ಎನ್. ಹಿರೇಮಠ ಸೇರಿ ಲೋಕಾಪುರ, ಲಕ್ಷಾನಟ್ಟಿ, ಅರಳಿಕಟ್ಟಿ, ನಾಗನಾಪುರ, ವೆಂಕಟಾಪುರ, ಜಾಲಿಕಟ್ಟಿ, ಚೌಡಾಪುರ, ವರ್ಚಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಇದ್ದರು.