ವಿಕಲಚೇತನ ಮಕ್ಕಳಿಗಾಗಿ ಬಿಎಲ್‌ಡಿಇ, ಸಂಭವ ಟ್ರಸ್ಟ್ ಒಪ್ಪಂದ

KannadaprabhaNewsNetwork |  
Published : Jun 30, 2026, 03:00 AM IST
ವಿಕಲಚೇತನ ಮಕ್ಕಳಿಗಾಗಿ ಬಿಎಲ್‌ಡಿಇ ಹಾಗೂ ಸಂಭವ ಟ್ರಸ್ಟ್ ಒಪ್ಪಂದ: ಸುನೀಲಗೌಡ ಪಾಟೀಲ | Kannada Prabha

ಸಾರಾಂಶ

ವಿಕಲಚೇತನ ಮಕ್ಕಳ ಸಮನ್ವಯ ಶಿಕ್ಷಣಕ್ಕಾಗಿ ಬಿಎಲ್‌ಡಿಇ ಹಾಗೂ ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮಧ್ಯೆ ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಕಲಚೇತನ ಮಕ್ಕಳ ಸಮನ್ವಯ ಶಿಕ್ಷಣಕ್ಕಾಗಿ ಬಿಎಲ್‌ಡಿಇ ಹಾಗೂ ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮಧ್ಯೆ ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ವಿಕಲಚೇತನ ಮಕ್ಕಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ. ಇಲ್ಲಿಗೆ ಸೇರ್ಪಡೆಯಾಗುವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಹೇಳಿದರು.

ನಗರದ ಬಿಎಲ್‌ಡಿಇ-ರಘುಕುಲ ಸಮನ್ವಯ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳುಳ್ಳ ಮಾದರಿ ಶಾಲೆ ನಿರ್ಮಿಸಲಾಗಿದ್ದು, ವಿಕಲಚೇತನ ಮಕ್ಕಳಿಗಾಗಿ ಶಿಕ್ಷಣ ಹಾಗೂ ಚಿಕಿತ್ಸೆ ಕೊಡಲಾಗುತ್ತಿದೆ. ಇಲ್ಲಿನ ವಿಕಲಚೇತನ ಮಕ್ಕಳಿಗೆ ಅತ್ಯಾಧುನಿಕ ಅನುಕೂಲಕರ ಸೌಲಭ್ಯಗಳನ್ನು ಶಾಲೆಯ ಪ್ರತಿಯೊಂದು ಕೊಠಡಿಯಲ್ಲೂ ಒದಗಿಸಲಾಗಿದೆ. ಮಕ್ಕಳ ಶಿಕ್ಷಣಕ್ಕೆ ಬೇಕಾದ ತರಬೇತುದಾರ ಶಿಕ್ಷಕರು, ವಿಶೇಷ ತರಬೇತಿ ಪಡೆದ ವೈದ್ಯರ ತಂಡವಿದೆ. ಈಗಾಗಲೇ ಎಂಟು ವರ್ಷಗಳಿಂದ 120 ಮಕ್ಕಳಿಗೆ ಇಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. 100 ವರ್ಷಗಳ ಇತಿಹಾಸವುಳ್ಳ ಬಿಎಲ್‌ಡಿಇ ಸಂಸ್ಥೆಯಿಂದ ಮೂರು ಎಕರೆ ಜಾಗದಲ್ಲಿ ಮಹತ್ವದ ಕಾರ್ಯ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮಕ್ಕಳ ಕೌಶಲ್ಯಾಭಿವೃದ್ಧಿಗೆ ಬೇಕಾದ ತರಬೇತಿ ಸಹ ಕೊಡಲಾಗುವುದು. ವಿಕಲಚೇತನರಿಗೆ ಅವರವರ ಶಕ್ತಿಯಾನುಸಾರ ತರಬೇತಿ ನೀಡಿ ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ವಿವಿಯ ರಿಜಿಸ್ಟ್ರಾರ್‌ ಡಾ.ರಾಘವೇಂದ್ರ ಕುಲಕರ್ಣಿ ಮಾತನಾಡಿ, ವಿಕಲಚೇತನ ಮಕ್ಕಳಿಗೆ 10ನೇ ತರಗತಿವರೆಗೆ ತರಬೇತಿ ನೀಡಿ, ಮುಂದೆ ಸಾಮಾನ್ಯ ಮಕ್ಕಳೊಂದಿಗೆ ಬೆರೆಯುವಂತಹ ಅವಕಾಶ ಕಲ್ಪಿಸಲಾಗುವುದು. 2017ರಿಂದ ಈ ಶಾಲೆನಡೆಸಲಾಗುತ್ತಿದ್ದು, ಶೇ.40ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವ 85 ಮಕ್ಕಳಿಗೆ ಇಲ್ಲಿ ತರಬೇತಿ ಕೊಡಲಾಗುತ್ತಿದೆ. ಟ್ರಸ್ಟ್‌ನ ರಾಜೇಂದ್ರ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲರು ಸೇರಿ ವಿಕಲಚೇತನ ಮಕ್ಕಳಿಗೆ ವಿಶೇಷವಾಗಿ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ. ಈ ಮಕ್ಕಳು ಮುಂದೆ ಜೀವನದಲ್ಲಿ ಯಾರ ಮೇಲೂ ಅವಲಂಬಿತರಾಗದಂತೆ ಮಾಡಲು ಈ ಸೇವೆ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಬಿಎಲ್‌ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್‌ ಶಾಸಕ ಸುನೀಲಗೌಡ ಪಾಟೀಲ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಅಭಿನವ ರುಣವಾಲ ಸಹಿ ಹಾಕಿದರು.

ಸುದ್ದಿಗೋಷ್ಠಿಯಲ್ಲಿ ವಿವಿಯ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಮುಖಂಡರಾದ ನರೇಂದ್ರ ಓಸ್ವಾಲ, ನಿರ್ಮಲ ರುಣವಾಲ, ಅಕ್ಷತ ರುಣವಾಲ, ಶ್ರೇಯಾ‌ ರುಣವಾಲ, ಲತಾ ರುಣವಾಲ, ಅನುಷಾ ರುಣವಾಲ, ಡಾ.ಈಶ್ವರ ಬಾಗೋಜಿ, ಬಿಎಲ್‌ಡಿಇ ಸಂಸ್ಥೆಯ ಡಾ.ಎಸ್.ಎನ್.ಬೆಂತೂರ, ಡಾ.ಆರ್‌.ಎನ್.ಕರಡಿ, ಡಾ.ರಾಜಕುಮಾರ ಬಾಗೇವಾಡಿ, ನಿವೇದಿತಾ, ರಕ್ಷಿತಾ, ಕೆ.ಸಿ.ಮೊಹಾಂತಿ, ಡಿ.ಡಿ.ಸ್ವೈನ್, ಎಂ.ಎ.ಕುಡಚಿ, ಐ.‌ಎಸ್.ಕಾಳಪ್ಪನವರ, ಸಿದ್ದನಗೌಡ ಬಿರಾದಾರ, ದಾನಮ್ಮ ಮಜ್ಜಿಗಿ, ಏಕನಾಥ ಜಾಧವ, ಜಯಂತಿ, ಡಾ.ಸಂಜಯ ಕಡ್ಲಿಮಟ್ಟಿ, ಡಾ.ಅಶೋಕ ಪಾಟೀಲ ಉಪಸ್ಥಿತರಿದ್ದರು.

ಮೈಸೂರಿಗೆ ಕಳಿಸಿ ವಿಶೇಷ ತರಬೇತಿ:

ಕಳೆದ ಕೆಲ ವರ್ಷಗಳ ಹಿಂದೆ ತಿಗಣಿಬಿದರಿಯ ಮಾತನಾಡದ ಹಾಗೂ ಕಿವಿ ಕೇಳದ‌ ಮಗುವಿನೊಂದಿಗೆ ಪಾಲಕರು ನಮ್ಮ ಕಚೇರಿಗೆ ಬಂದಿದ್ದರು, ಆಗ ನಾನು ಸಂಸ್ಥೆಯ ವೈದ್ಯರನ್ನು ಕರೆಸಿ ಮಾತನಾಡಿದೆ. ನಮ್ಮ ವೈದ್ಯರು ಆ ಮಗುವಿಗೆ ಕಿವಿ ಕೇಳುವ ಮಷಿನ್‌ ಹಾಕಿದಾಗ ಆ ಮಗು ಮಾತನಾಡಲು ಆರಂಭಿಸಿತು. ಈ ರೀತಿ ಸಮಸ್ಯೆ ಅನುಭವಿಸುತ್ತಿರುವ ಎಲ್ಲ ಮಕ್ಕಳಿಗೂ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಈ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಇಲ್ಲಿನ ಶಿಕ್ಷಕರನ್ನು ಮೈಸೂರಿಗೆ ಕಳಿಸಿ ವಿಶೇಷ ತರಬೇತಿ ಕೊಡಿಸಿ, ಅವರಿಂದ ಈ ವಿಶೇಷಚೇತನ ಮಕ್ಕಳಿಗೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತಿದೆ.. ಇಂತಹ ವಿಕಲಚೇತನ ಮಕ್ಕಳಿಗೆ ಉದ್ಯೋಗ ಅವಕಾಶ ಕೊಡಬೇಕು ಎಂದು ಮುಂಬರುವ ಅಧಿವೇಶನದಲ್ಲಿಯೂ ಸಹ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲತೆ ತಡೆಗೆ ಪೋಲಿಯೋ ಲಸಿಕೆ ಕಡ್ಡಾಯ: ಪೊನ್ನಣ್ಣ
ಜಾಗತಿಕ ಆರ್ಥಿಕತೆಗೆ ಎಂಎಸ್‌ಎಂಇಯಿಂದ ಅಗಾಧ ಕೊಡುಗೆ: ಸಿಎ ಎಸ್‌.ಎಸ್‌. ನಾಯಕ್‌