ಮಡಿಕೇರಿ: ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವ ಮೂಲಕ ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಚಾಲನೆ ದೊರೆಯಿತು.
ಶಾಸಕ ಎ.ಎಸ್.ಪೊನ್ನಣ್ಣ ವಿರಾಜಪೇಟೆಯ ತಮ್ಮ ಗೃಹ ಕಚೇರಿ ಹಾಗೂ ಡಾ.ಮಂತರ್ ಗೌಡ ಅವರು ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಶಿಶುಗಳಿಗೆ ಪೋಲಿಯೋ ಹನಿ ನೀಡಿ ಕಾರ್ಯಕ್ರಮದ ಮಹತ್ವ ಕುರಿತು ಸಂದೇಶ ಸಾರಿದರು. ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಐದು ವರ್ಷದ ಮಕ್ಕಳಿಗೆ ಪೋಲಿಯೋ ಹನಿ ನೀಡಿದರು.ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ರಾಷ್ಟ್ರವು ಪೋಲಿಯೋ ಮುಕ್ತವಾಗಿದ್ದರೂ ಸಹ, ಇತರೆ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಇರುವುದರಿಂದ ಹೆಚ್ಚಿನ ಎಚ್ಚರ ವಹಿಸಬೇಕಿದೆ. ಆದ್ದರಿಂದ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು ಎಂದು ಕರೆ ನೀಡಿದರು.
ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವುದರಿಂದ ಮಕ್ಕಳ ಬೆಳವಣಿಗೆ ಸಂದರ್ಭದಲ್ಲಿ ಉಂಟಾಗಬಹುದಾದ ವಿಕಲತೆಯನ್ನು ತಡೆಯಬಹುದಾಗಿದೆ. ಆದ್ದರಿಂದ ಈ ಬಗ್ಗೆ ಹತ್ತಿರದವರಿಗೂ ಮಾಹಿತಿ ನೀಡಿ ಶಿಶುಗಳಿಗೆ ಪೋಲಿಯೋ ಹನಿ ಹಾಕಿಸಬೇಕು ಎಂದರು. ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಎರಡು ಹನಿ ನೀಡುವುದರಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾತನಾಡಿ, ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ವಿಶ್ವಸಂಸ್ಥೆ, ರೋಟರಿ ಸಂಸ್ಥೆ, ರೆಡ್ ಕ್ರಾಸ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳು ಸರ್ಕಾರದ ಕೈಜೋಡಿಸಿ ಕೆಲಸ ನಿರ್ವಹಿಸುತ್ತಿವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಐದು ವರ್ಷದೊಳಗೆ 29,011 ಮಕ್ಕಳು ಇದ್ದು, ಗ್ರಾಮೀಣ ಪ್ರದೇಶದಲ್ಲಿ 26,373 ಮತ್ತು ನಗರ ಪ್ರದೇಶದಲ್ಲಿ 2,638 ಮಕ್ಕಳನ್ನು ಗುರುತಿಸಲಾಗಿದೆ ಎಂದರು. ಹಾಗೆಯೇ ವಲಸೆ ಮಕ್ಕಳನ್ನು ಸಹ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆರ್.ಸಿ.ಎಚ್.ಅಧಿಕಾರಿ ಡಾ.ಮಧುಸೂದನ ಮಾತನಾಡಿ ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 471 ಬೂತ್ ತೆರೆಯಲಾಗಿದೆ. ಜನಸಂದಣಿ ಪ್ರದೇಶಗಳು, ಬಸ್ ನಿಲ್ದಾಣ ಹಾಗೂ ಪ್ರವಾಸಿ ಕೇಂದ್ರಗಳನ್ನು ಗುರಿಯಾಗಿಸಿ, 33 ಟ್ರಾನ್ಸಿಟ್ ಬೂತ್ ಗಳನ್ನು ತೆರೆಯಲಾಗಿದ್ದು, ಮಡಿಕೇರಿ ತಾಲೂಕಿನಲ್ಲಿ 1 ಸಂಚಾರಿ ತಂಡವನ್ನು ಸಹ ನಿಯೋಜಿಸಲಾಗಿದೆ ಎಂದರು.
ಜಿಲ್ಲೆಯಾದ್ಯಂತ ಲಸಿಕಾ ಬೂತ್ ಗಳಲ್ಲಿ ಕಾರ್ಯನಿರ್ವಹಿಸಲು 1952 ಲಸಿಕೆ ನೀಡುವವರು, 84 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಡಾ.ಮಧುಸೂದನ ಅವರು ಹೇಳಿದರು. ತಾಲೂಕು ವೈದ್ಯಾಧಿಕಾರಿ ಡಾ. ಸನತ್ ಕುಮಾರ್, ಡಾ.ಯತಿರಾಜು, ಡಾ.ಇಂದೂದರ ಮಾತನಾಡಿದರು.ರೋಟರಿ ಸಂಸ್ಥೆಯ ಮನೋಹರ್ ಕಾಮತ್, ರತನ್ ತಮ್ಮಯ್ಯ, ಡಾ.ಚಂದ್ರಶೇಖರ್, ಡಾ.ದಿವ್ಯಾರಾಣಿ, ಆರೋಗ್ಯ ಶಿಕ್ಷಣಾಧಿಕಾರಿ ಪಾಲಕ್ಷ, ಶ್ರೀಕಾಂತ್, ದೇವರಾಜು ಇತರರು ಇದ್ದರು.ಪೋಲಿಯೋ ಹನಿ ನೀಡುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 471 ಬೂತ್ ತೆರೆಯಲಾಗಿದೆ. ಜನಸಂದಣಿ ಪ್ರದೇಶಗಳು, ಬಸ್ ನಿಲ್ದಾಣ ಹಾಗೂ ಪ್ರವಾಸಿ ಕೇಂದ್ರಗಳನ್ನು ಗುರಿಯಾಗಿಸಿ, 33 ಟ್ರಾನ್ಸಿಟ್ ಬೂತ್ ಗಳನ್ನು ತೆರೆಯಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 1 ಸಂಚಾರಿ ತಂಡವನ್ನು ಸಹ ನಿಯೋಜಿಸಲಾಗಿದೆ