ಉಪ್ಪಿನಂಗಡಿ: ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಧೀನದ ದೇವಾಲಯದ ಆಸ್ತಿ ರಕ್ಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಈ ಸಂಬಂಧ ಕಂದಾಯ ಹಾಗೂ ಮುಜರಾಯಿ ಇಲಾಖಾಧಿಕಾರಿಗಳು ಜಂಟಿಯಾಗಿ ಕಾರ್ಯೋನ್ಮುಖರಾಗಲು ಸರಕಾರ ನಿರ್ದೇಶನ ನೀಡಿದೆ ಎಂದು ರಾಜ್ಯ ಮುಜರಾಯಿ ಇಲಾಖೆ ಆಯುಕ್ತ ಶರತ್ ಬಿ. ಹೇಳಿದರು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಬಾರಿ ಕಂದಾಯ ಹಾಗೂ ಮುಜರಾಯಿ ಇಲಾಖೆಗಳಿಗೆ ಒಬ್ಬರೇ ಮಂತ್ರಿಗಳಿರುವುದರಿಂದ ದೇವಾಲಯಗಳ ಆಸ್ತಿ ರಕ್ಷಣೆ ವಿಚಾರದಲ್ಲಿ ಯೋಜನಾ ಬದ್ದವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಡಿವಿಜನ್ ವಾರು ಸಭೆಗಳನ್ನು ಕರೆದು ಸಮಸ್ಯೆಗಳನ್ನು ಮತ್ತು ಅವುಗಳ ಪರಿಹಾರದ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಗುತ್ತಿದೆ ಎಂದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸ್ವಂತ ನಿಧಿಯಿಂದ ದೇವಾಲಯದಲ್ಲಿ ಸಭಾಂಗಣ ನಿರ್ಮಾಣಕ್ಕೆ ಸಂಬಂಧಿಸಿ ಕಡತಗಳು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದೆ ವಿನಃ ವರ್ಷ ಕಳೆದರೂ ಇಲಾಖೆ ಅನುಮೋದನೆ ದೊರೆಯದ ಬಗ್ಗೆ, ಸರ್ಕಾರದ ವಿಳಂಬ ನೀತಿ ಭಕ್ತ ಜನತೆಗೆ ಅಸಮಾಧಾನ ತಂದಿದೆ ಎಂದು ಮಾದ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ, ಇಲಾಖೆಯೊಳಗಿನ ಕೆಲ ಅಧಿಕಾರಿಗಳ ತಪ್ಪು ನಡೆಯಿಂದಾಗಿ ಈ ಅವಾಂತರಗಳು ಘಟಿಸಿವೆ. ಮುಂದಕ್ಕೆ ಇಲಾಖೆ ಪ್ರಕ್ರಿಯೆಯಲ್ಲಿನ ಅನಗತ್ಯ ವಿಳಂಬವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮುಜರಾಯಿ ಇಲಾಖೆ ಸಹಾಯಕ ಆಯುಕ್ತರಾದ ಜಯಮ್ಮ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ , ಸದಸ್ಯರಾದ ಹರೀಶ್ ಉಪಾಧ್ಯಾಯ, ವೆಂಕಪ್ಪ ಪೂಜಾರಿ ಅವರು ಆಯುಕ್ತರನ್ನು ದೇವಳದ ಶಿಷ್ಠಾಚಾರದಂತೆ ಶಾಲು ಹೊಂದಿಸಿ, ಪ್ರಸಾದ ನೀಡಿ ಸ್ವಾಗತಿಸಿದರು.

ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಪದ್ಮನಾಭ ಕುಲಾಲ್, ಕೃಷ್ಣ ಪ್ರಸಾದ್ ಬಡಿಲ, ದಿವಾಕರ ಗೌಡ, ಸುಧಾಕರ ಶೆಟ್ಟಿ, ಗಿರೀಶ್ ಮತ್ತಿತರರಿದ್ದರು.