ರಕ್ತದಾನದಿಂದ ಜೀವ ರಕ್ಷಣೆ ಸಾಧ್ಯ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

KannadaprabhaNewsNetwork |  
Published : Jun 28, 2025, 12:18 AM IST
27ರಕ್ತದಾನ | Kannada Prabha

ಸಾರಾಂಶ

ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ, ಮಣಿಪಾಲದ ಕೆಎಂಸಿಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಕ್ತದಾನವು ಆಪತ್ತಿನಲ್ಲಿರುವವರ ಜೀವ ಉಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ರಕ್ತದಾನ ಮಾಡುವುದಕ್ಕೆ ಹೆಚ್ಚು ಜನರು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕರೆ ನೀಡಿದ್ದಾರೆ.ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ, ಮಣಿಪಾಲದ ಕೆಎಂಸಿಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಬಾರಿ ರಕ್ತದಾನ ಮಾಡುವುದರಿಂದ ಮೂರು ಜನರ ಜೀವಗಳನ್ನು ಉಳಿಸಲು ಸಾಧ್ಯ. ಈ ರಕ್ತದಾನ ಶಿಬಿರದಲ್ಲಿಯೂ 100 ಕ್ಕೂ ಹೆಚ್ಚು ಜನ ಉತ್ಸಾಹಕರಾಗಿ ರಕ್ತದಾನ ಮಾಡಿರುವುದು ಅಭಿನಂದನೀಯ. ಸರ್ಕಾರಿ ನೌಕರರು ತಮ್ಮ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ರಕ್ತದಾನದಂತಹ ಒಂದು ಉತ್ತಮ ಸಾಮಾಜಿಕ ಜವಾಬ್ದಾರಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ವಿಶ್ವದಲ್ಲಿ ಪ್ರತೀ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದ ಅವಶ್ಯಕತೆ ಪೂರೈಸಲು ರಕ್ತದಾನ ಶಿಬಿರಗಳಲ್ಲಿ ಮಾತ್ರವಲ್ಲದೆ ಜನ್ಮದಿನಾಚರಣೆ ಸೇರಿದಂತೆ ಮತ್ತಿತರ ವಿಶೇಷ ಕಾರ್ಯಕ್ರಮಗಳಲ್ಲಿ ಸಹ ರಕ್ತದಾನ ಮಾಡಿದರೆ ಆಪತ್ತಿನಲ್ಲಿರುವವರಿಗೆ ನೆರವಾಗುವುದಕ್ಕೆ ಸಾಧ್ಯವಿದೆ ಎಂದರು.ಮಣಿಪಾಲ ಕೆ.ಎಂ.ಸಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶಮಿ ಶಾಸ್ತ್ರೀ ಯಾರೆಲ್ಲಾ ರಕ್ತದಾನ ಮಾಡಬಹುದು ಎಂಬ ಬಗ್ಗೆ ನಿಖರ ಮಾಹಿತಿ ನೀಡಿದರು.ಜಿಲ್ಲಾ ಸರ್ಜನ್ ಡಾ. ಅಶೋಕ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಚ್ಚು ಬಾರಿ ರಕ್ತದಾನ ಮಾಡಿದ ಮೀನುಗಾರಿಕೆ ಸಹಾಯಕ ನಿರ್ದೇಶಕ ದಿವಾಕರ, ಯುವ ಸಬಲೀಕರಣ ಇಲಾಖೆಯ ಮಂಜುನಾಥ್, ಕಂದಾಯ ಇಲಾಖೆಯ ಯತೀಶ್ ಕಿದಿಯೂರು, ಸ್ವಾತಿ, ಲಾವಣ್ಯ, ಲತಾ ಅವರನ್ನು ಸನ್ಮಾನಿಸಲಾಯಿತು. ಈ ಶಿಬಿರದಲ್ಲಿ 101 ಯೂನಿಟ್‌ನಷ್ಟು ರಕ್ತ ಸಂಗ್ರಹಣೆ ಮಾಡಲಾಯಿತು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!