ಮೂಡಿಗೆರೆ ಕ್ಷೇತ್ರದ ಮಳೆ ಹಾನಿ ಪ್ರದೇಶಕ್ಕೆ ಸಚಿವರು, ಶಾಸಕರು ಭೇಟಿ
ರಾಜ್ಯದಲ್ಲಿ ಪ್ರತೀ ವರ್ಷ 100 ಕಾಲುಸಂಕ ನಿರ್ಮಿಸಲು ತಯಾರಿಸಲಾಗಿದ್ದ ನೀಲಿ ನಕ್ಷೆಯಂತೆ ಈಗಾಗಲೇ ₹20 ಕೋಟಿ ಅನುದಾನದಲ್ಲಿ 20 ಕಡೆ ಕಾಲುಸಂಕ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮೂಡಿಗೆರೆ ತಾಲೂಕಿನ ಹಳಸೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ 36 ಶಾಸಕರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲುಸಂಕ ನಿರ್ಮಿಸಲು ಪ್ರಾಥಮಿಕ ಹಂತದಲ್ಲಿ ತಲಾ ಒಂದು ಕೋಟಿ ಅನುದಾನ ಒದಗಿಸಲಾಗಿದೆ. ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮಳೆಯಿಂದ ರಸ್ತೆ, ಸೇತುವೆ, ರೈತರ ಬೆಳೆ ಮತ್ತಿತರ ಆಸ್ತಿ ಪಾಸ್ತಿಗಳಿಗೆ ಹಾನಿಯಾದ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಂಬಂಧ ವರದಿ ಬಂದ ಕೂಡಲೆ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳೊಂದಿಗೆ ಸಭೆ ನಡೆಸಿ, ಅತಿವೃಷ್ಟಿ ಪರಿಸ್ಥಿತಿ ನಿಭಾಯಿಸಲು ಸೂಕ್ತ ಸೂಚನೆ ನೀಡಲಿದ್ದಾರೆ. 2019 ರಿಂದ ನಿರಂತರ ವಾಗಿ ಅತಿವೃಷ್ಟಿಯುಂಟಾಗಿ ಸೇತುವೆ, ರಸ್ತೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ಗುಡ್ಡ ಕುಸಿತದಿಂದ ಜಮೀನುಗಳಿಗೆ ಹಾನಿ ಯಾಗಿದ್ದು, ಅವುಗಳೆಲ್ಲವನ್ನು ಸರಿಪಡಿಸಲಾಗಿದೆ. ಕೆಲವೆಡೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಮೂಡಿಗೆರೆ-ಸಕಲೇಶಪುರ ನಡುವಿನ 40 ಕಿ.ಮೀ. ರಸ್ತೆ ಹಾನಿಗೊಳಗಾಗಿದ್ದು, ಈ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಲಿದ್ದಾರೆ. ಕ್ರಿಯಾಯೋಜನೆ ಸಿದ್ಧವಾದ ಕೂಡಲೇ ಅಗತ್ಯ ಅನುದಾನ ಒದಗಿಸ ಲಾಗುವುದು. 2014 ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ರಾಜ್ಯದ ವಿವಿಧೆಡೆ 40 ಸೇತುವೆ ನಿರ್ಮಿಸಲು ಮಂಜೂರಾತಿ ನೀಡಿದ್ದರು. ಅದರ ನಿರ್ಮಾಣ ಕಾಮಗಾರಿ ಹೊಣೆಯನ್ನು ಕೆಆರ್‌ಡಿಸಿಎಲ್ ಸಂಸ್ಥೆಗೆ ವಹಿಸ ಲಾಗಿತ್ತು. ಅದರಲ್ಲಿ 20 ಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ 20 ಕಡೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಇದ್ದರು.
ಮೂಡಿಗೆರೆ ಕ್ಷೇತ್ರದಲ್ಲಿ ಮಳೆಯಿಂದ ಶಿಥಿಲಗೊಂಡಿರುವ ದೇವವೃಂದ-ಜಪಾವತಿ ಸೇತುವೆ ಹಾಗೂ ರಸ್ತೆಗಳನ್ನು ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.30 ಕೆಸಿಕೆಎಂ 4ಮೂಡಿಗೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು. ಶಾಸಕರಾದ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ ಇದ್ದರು.