ಜೂನ್‌ 9 ರಿಂದ ಮಂಗಳೂರು ವಿವಿ ಪದವಿ ವಾರ್ಷಿಕ ಪರೀಕ್ಷೆ: ಪ್ರೊ.ಪಿ.ಎಲ್‌.ಧರ್ಮ

KannadaprabhaNewsNetwork |  
Published : May 30, 2025, 11:55 PM IST
ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಅಧ್ಯಕ್ಷತೆಯಲ್ಲಿ ಮಂಗಳೂರು ವಿವಿ ಪ್ರಥಮ ವಿಶೇಷ ಸಭೆ  | Kannada Prabha

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಆರನೇ ಸೆಮಿಸ್ಟರ್‌ ವಾರ್ಷಿಕ ಪರೀಕ್ಷೆಗಳು ಜೂನ್‌ 9 ರಿಂದ ಆರಂಭವಾಗಿ ಜುಲೈ 15 ರಂದು ಮುಕ್ತಾಯವಾಗಲಿದೆ. ಜುಲೈ 28 ರಿಂದ ಪದವಿ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕುಲಪತಿ ಪ್ರೊ..ಪಿ.ಎಲ್‌.ಧರ್ಮ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಆರನೇ ಸೆಮಿಸ್ಟರ್‌ ವಾರ್ಷಿಕ ಪರೀಕ್ಷೆಗಳು ಜೂನ್‌ 9 ರಿಂದ ಆರಂಭವಾಗಿ ಜುಲೈ 15 ರಂದು ಮುಕ್ತಾಯವಾಗಲಿದೆ. ಜುಲೈ 28 ರಿಂದ ಪದವಿ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕುಲಪತಿ ಪ್ರೊ..ಪಿ.ಎಲ್‌.ಧರ್ಮ ಹೇಳಿದ್ದಾರೆ.

ಮಂಗಳೂರು ವಿವಿ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಗುರುವಾರ ನಡೆದ ಈ ಸಾಲಿನ ಶೈಕ್ಷಣಿಕ ಮಂಡಳಿಯ ಪ್ರಥಮ ವಿಶೇಷ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ನಾತಕ ಪದವಿ ಪರೀಕ್ಷೆ ಬಳಿಕ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 35 ದಿನಗಳು ಬೇಕು. ಹಾಗಾಗಿ ಜು. 28 ರಂದು ಪದವಿ ತರಗತಿ ಆರಂಭಿಸಲು ಚಿಂತಿಸಲಾಗಿದೆ ಎಂದರು. ಸರ್ಕಾರದ ಒಪ್ಪಿಗೆಯ ನಿರೀಕ್ಷೆ:

ಮಂಗಳೂರು ವಿವಿಯ ಬನ್ನಡ್ಕ, ನೆಲ್ಯಾಡಿ, ಕೊಣಾಜೆ ಹಾಗೂ ವಿವಿ ಸಂಜೆ ಘಟಕ ಕಾಲೇಜುಗಳನ್ನು ಈ ಶೈಕ್ಷಣಿಕ ವರ್ಷದಿಂದ ನೇರವಾಗಿ ಸರ್ಕಾರವೇ ನಡೆಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರದ ಅಭಿಪ್ರಾಯಕ್ಕೆ ಕಾಯಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ 30ಕ್ಕಿಂತ ಕಡಿಮೆ ಇದ್ದರೆ ಕಾಲೇಜು ನಡೆಸಲು ಸಾಧ್ಯವಾಗದು. ಹೀಗಾಗಿ ಅಂತಹ ಕಾಲೇಜುಗಳನ್ನು, ಅಲ್ಲಿರುವ ಕೋರ್ಸ್‌ಗಳನ್ನು ಮುಚ್ಚುವ ಬಗ್ಗೆ ವಿವಿ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ಆರ್ಥಿಕ ಸದೃಢಕ್ಕೆ ಕ್ರಮ:

ಮಂಗಳೂರು ವಿವಿಯನ್ನು ಆರ್ಥಿಕವಾಗಿ ಸದೃಢಗೊಳಿಸುವ ದೃಷ್ಟಿಯಿಂದ ಎಲ್ಲ 18 ವಿಭಾಗಗಳಲ್ಲಿ 42 ಬಗೆಯ ಕಾರ್ಯಕ್ರಮಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಕಾಯಂ ಪ್ರಾಧ್ಯಾಪಕರ ಕೊರತೆ, ನ್ಯಾಕ್‌ನ ಬಿ ಗ್ರೇಡ್‌ ಹೊರತಾಗಿಯೂ ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಿ ಹಣಕಾಸು ಹರಿವಿಗೆ ಪ್ರಯತ್ನಿಸಲಾಗುತ್ತಿದೆಎಂದರು.

ಕಳೆದ 15 ವರ್ಷಗಳಿಂದ ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯರನ್ನು ವಿವಿಯ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ವಿವಿಯ ಸದ್ಯದ ಪರಿಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕ ಹೊರತುಪಡಿಸಿ ಬೇರೆ ಯಾವುದೇ ನೇಮಕಾತಿ ನಡೆಸುತ್ತಿಲ್ಲ. ಈಗಾಗಲೇ ಹೊರಗುತ್ತಿಗೆಯಲ್ಲಿರುವ 140 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಉಳಿದ 60 ಮಂದಿಯನ್ನು ಇನ್ನೂ ತಗೆಯಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ, ಮಂಡ್ಯದ ಮಧು ಮಾದೇ ಗೌಡರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಕೈಗೊಂಡ ಕ್ರಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರೊ.ಪಿ.ಎಲ್‌.ಧರ್ಮ, ಪಿಯುಸಿ ಬಳಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೇರೆ ಕಡೆ ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಡೀಮ್ಡ್‌ ವಿವಿಗಳಲ್ಲಿ 500-600 ಮಕ್ಕಳಿದ್ದರೆ, ಮಂಗಳೂರು ವಿವಿ ವ್ಯಾಪ್ತಿಯ ಕೊಡಗು, ದ.ಕ. ಮತ್ತು ಉಡುಪಿಗಳಲ್ಲಿ 1.60 ಲಕ್ಷದಷ್ಟು ವಿದ್ಯಾರ್ಥಿಗಳಿದ್ದಾರೆ. ಖಾಸಗಿ ವಿವಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಬೇಗನೆ ಪಾಠ, ಪರೀಕ್ಷೆ, ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಿ, ಬೇಗನೆ ತರಗತಿ ಆರಂಭಿಸುತ್ತಾರೆ ಎಂದರು.

ವಿವಿಯಲ್ಲಿ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಸದ್ಯ ಎರಡ್ಮೂರು ಯೋಜನೆಗಳು ಬಂದಿವೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿದ ಪರಿಣಾಮ ವಿವಿಗೆ ಕಳೆದ 13 ತಿಂಗಳಲ್ಲಿ 1.50 ಕೋಟಿ ರು. ಲಾಭ ದೊರಕಿಗೆ ಎಂದರು.

ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ಕುಲಸಚಿವ ಪ್ರೊ.ಸಂಗಪ್ಪ, ಆಡಳಿತ ಕುಲಸಚಿವ ರಾಜು ಮೊಗವೀರ ಇದ್ದರು.

36.98 ಕೋಟಿ ರು.ಗಳ ಕೊರತೆ ಬಜೆಟ್‌

ಮಂಗಳೂರು ವಿವಿಯ 2025-26ನೇ ಸಾಲಿನ ಆಯವ್ಯಯ ಅಂದಾಜನ್ನು ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ ಮಂಡಿಸಿದರು. ಈ ಅವಧಿಯಲ್ಲಿ ಒಟ್ಟು 163.29 ಕೋಟಿ ರು.ಗಳ ಆದಾಯ ಅಂದಾಜಿಸಲಾಗಿದ್ದು, 200.27 ಕೋಟಿ ರು.ಗಳ ಖರ್ಚು ನಿರೀಕ್ಷಿಸಲಾಗಿದೆ. ಸುಮಾರು 36.98 ಕೋಟಿ ರು. ಗಳ ಕೊರತೆ ಕಾಣಿಸಲಾಗಿದೆ. ಕಳೆದ ಸಾಲಿನಲ್ಲಿ 20.79 ಕೋಟಿ ರು.ಗಳ ಕೊರತೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಾಲಿನಲ್ಲಿ 16.19 ಕೋಟಿ ರು.ಗಳ ಕೊರತೆ ಹೆಚ್ಚಾಗಿರುತ್ತದೆ. ಈ ಸಾಲಿನಲ್ಲಿ ಸರ್ಕಾರ ಯೋಜನೇತರ ಅನುದಾನವಾಗಿ 63.35 ಕೋಟಿ ರು. ಮಂಜೂರು ಮಾಡಿದೆ. ಆದರೆ ವಿವಿಯಲ್ಲಿ 438 ಮಂದಿ ಪಿಂಚಣಿದಾರರಿದ್ದು, 361 ಮಂದಿ ಪಿಂಚಣಿದಾರರು ಮತ್ತು 77 ಮಂದಿ ಕುಟುಂಬ ಪಿಂಚಣಿದಾರರಿದ್ದಾರೆ. ಇವರಿಗೆ ವಾರ್ಷಿಕ 30 ಕೋಟಿ ರು. ಪಿಂಚಣಿ ಮೊತ್ತಕ್ಕೆ ವ್ಯಯಿಸಬೇಕಾಗುತ್ತದೆ. ಈ ಸಾಲಿನಲ್ಲಿ 22 ಮಂದಿ ವಯೋನಿವೃತ್ತಿ ಹೊಂದಲಿದ್ದು, ಅವರಿಗೆ 13.34 ಕೋಟಿ ರು. ಮೊತ್ತದ ಅಗತ್ಯವಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ