ಕನ್ನಡಪ್ರಭ ವಾರ್ತೆ ಇಂಡಿ
ಉತ್ತರ ಕರ್ನಾಟಕ ಅಭಿವೃದ್ಧಿಗೆ ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ ಪ್ರತಿ ವರ್ಷ ನಾಲ್ಕೈದು ಸಾವಿರ ಕೋಟಿ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ.ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ, ಬೆಳಗಾವಿ ವಿಭಾಗದ ಹಲವು ಕ್ಷೇತ್ರಗಳು ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಹಾವೇರಿ, ವಿಜಯಪುರದಂತ ಜಿಲ್ಲೆಗಳು ಶಿಕ್ಷಣ, ಉದ್ಯೋಗ, ಆರ್ಥಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಿಂದೆ ಇವೆ. ಹೀಗಾಗಿ ಈ ಭಾಗ ಅಭಿವೃದ್ಧಿ ಆಗಬೇಕು. ಈ ಭಾಗದ ಜನರು ದುಡಿಯಲು ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಗೂಳೆ ಹೋಗುತ್ತಿರುವುದು ಪ್ರತಿ ವರ್ಷ ಕಾಣುತ್ತೇವೆ.ಉತ್ತರ ಕರ್ನಾಟಕ ಸರ್ವವಿಧದಲ್ಲಿ ಅಭಿವೃದ್ಧಿ ಹೊಂದಲು ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿದರೆ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಹೀಗಾಗಿ ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸುವುದು ಅಗತ್ಯವಿದೆ ಎಂದು ಒತ್ತಾಯಿಸಿದರು.
ಹೋಬಳಿ ಕೇಂದ್ರಗಳಿಗೆ ಒತ್ತಾಯ:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ, ನಾದ, ಹೊರ್ತಿ ಹಾಗೂ ಅಗರಖೇಡ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳ ಜನತೆ ದೂರದ ಬಳ್ಳೊಳ್ಳಿ, ಇಂಡಿ ಹೋಬಳಿ ಕೇಂದ್ರಗಳಿಗೆ ಹೋಗಿ ಬರಲು ದೂರವಾಗುತ್ತಿದೆ. ಇಂಡಿ ತಾಲೂಕು ಭೌಗೋಳಿಕವಾಗಿ ಅತ್ಯಂತ ದೊಡ್ಡ ತಾಲೂಕು ಆಗಿದ್ದು, ಈ ತಾಲೂಕಿನ ಅಥರ್ಗಾ, ನಾದ, ಹೊರ್ತಿ, ಅಗರಖೇಡ ಗ್ರಾಮಗಳು ಅತ್ಯಂತ ದೊಡ್ಡ ಗ್ರಾಮಗಳಾಗಿವೆ. ಹೋಬಳಿ ಕೇಂದ್ರವಾಗಲು ಅರ್ಹತೆ ಹೊಂದಿವೆ. ಈ ಗ್ರಾಮಗಳು ಹೋಬಳಿ ಕೇಂದ್ರವನ್ನಾಗಿಸಲು ಸರ್ಕಾರ ಹೊಸ ಹೋಬಳಿ ಕೇಂದ್ರಗಳನ್ನಾಗಿ ಮಾಡುವ ಕುರಿತು ಸರ್ಕಾರದ ಸ್ಪಷ್ಟ ನಿಲುವು ಹಾಗೂ ಯಾವಾಗ ಮಂಜೂರಾತಿ ನೀಡಲಾಗುತ್ತದೆ ಎಂಬ ವಿವರ ನೀಡುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕಂದಾಯ ಸಚಿವರಿಗೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು, ಹೊಸದಾಗಿ ಹೋಬಳಿಗಳನ್ನು ಸೃಜಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡುತ್ತಿಲ್ಲ. ಆದ್ದರಿಂದ ಇಂಡಿ ತಾಲೂಕಿನ ಅಥರ್ಗಾ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಸೃಜಿಸುವ ಪ್ರಸ್ತಾವನೆಯನ್ನು ಮುಂದೂಡಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಹಿಂಬರಹ ನೀಡಲಾಗಿದೆ ಎಂದು ಉತ್ತರಿಸಿದರು.ಇಂಡಿಯಲ್ಲಿ ಹೈಟೆಕ್ ಬಸ್ ನಿಲ್ದಾಣ:
ಇಂಡಿ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಿ ಹೈಟೆಕ್ ಬಸ್ ನಿಲ್ದಾಣವನ್ನಾಗಿ ನಿರ್ಮಾಣ ಮಾಡಲು ಬೇಕಾಗುವ ಅನುದಾನ ಎಷ್ಟು, ಇಂಡಿ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದರು. ಇದಕ್ಕೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಉತ್ತರಿಸಿ, ಇಂಡಿ ನಗರದ ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಅಂದಾಜು ₹ 7 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಲೋಕೊಪಯೋಗಿ ಇಲಾಖೆ ದರಗಳ ಪ್ರಕಾರ ಪ್ರಸ್ತಾವನೆಯನ್ನು ಪರಿಷ್ಕರಿಸಿ ಪೋರ್ಟಲ್ ಮುಖಾಂತರ ಅಪ್‌ಲೋಡ್ ಮಾಡಲಾಗಿದೆ. ಕಾಮಗಾರಿಗೆ ಅನುದಾನ ದೊರೆತ ನಂತರ ಆದ್ಯತೆಯ ಮೇರೆಗೆ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.