ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಸನ ಜಿಲ್ಲೆಯ ಶಿರಾಡಿಘಾಟ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಆರೋಪಿ ಇಂದುಶೇಖರ್ ಅವರ ಚಿಕ್ಕ ಬಾಮೈದ ಶಂಕರ್ ಮತ್ತು ಇವರ ಪತ್ನಿ ನಳಿನಿ ಅವರ ಮೃತದೇಹ ಪತ್ತೆಯಾಗಿದೆ. ಆರೋಪಿ ಇಂದುಶೇಖರ್‌ನನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು. ಈ ವೇಳೆ ಶಿರಾಡಿಘಾಟ್‌ನ ಅರಣ್ಯ ಪ್ರದೇಶದಲ್ಲಿ ಕಂದು ಬಣ್ಣದ ಬಟ್ಟೆಯಲ್ಲಿ ಸುತ್ತಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹಗಳು ಪತ್ತೆಯಾಯಿತು. ಪ್ಲಾಸ್ಟಿಕ್ ಚೀಲವನ್ನು ದಾರದಿಂದ ಕಟ್ಟಲಾಗಿತ್ತು. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಹಾಗೂ ಡಿಎನ್‌ಎ ಪರೀಕ್ಷೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೊತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.
7 ಮೃತದೇಹಗಳ ಪತ್ತೆಯೊಂದಿಗೆ ಶೋಧ ಕಾರ್ಯಾಚರಣೆ ಸೋಮವಾರ ಮುಕ್ತಾಯಗೊಂಡಿದ್ದು, ಇದೀಗ ಪೊಲೀಸರು ಆರೋಪಿಯ ಹೇಳಿಕೆಗಳು, ಸಾಕ್ಷ್ಯಾಧಾರಗಳು ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.ಮೃತದೇಹಗಳ ಸಾಗಿಸಲು ಒಂದೇ ರೀತಿಯ ವಿಧಾನ:
ಆರ್‌ಎಂಸಿ ಯಾರ್ಡ್‌ನಲ್ಲಿ ವಸ್ತುಗಳ ಖರೀದಿ:ಆರೋಪಿ ಇಂದುಶೇಖರ್ ತನ್ನ ಏರಿಯಾ ಸುತ್ತಮುತ್ತ ಅಂಗಡಿಗಳಲ್ಲಿ ಹತ್ಯೆ ಮಾಡಲು ಬೇಕಾದ ವಸ್ತುಗಳ ಖರೀದಿ ಮಾಡಿದ್ದ. ಮೃತದೇಹಗಳ ಪ್ಯಾಕಿಂಗ್ ಮಾಡಲು ಬೇಕಾದ ವಸ್ತುಗಳು, ರಕ್ತ ಕ್ಲೀನ್ ಮಾಡಲು ಬೇಕಾದ ಕೆಮಿಕಲ್ ಸೇರಿ ಹಲವು ವಸ್ತುಗಳನ್ನು ತನ್ನ ಮನೆಯ ಸಮೀಪದ ಅಂಗಡಿಗಳಲ್ಲಿ ಖರೀದಿ ಮಾಡಿದ್ದ. ಇಲ್ಲಿ ಸಿಗದೆ ಇರುವ ವಸ್ತುಗಳನ್ನು ಯಶವಂತಪುರದ ಆರ್‌ಎಂಸಿ ಯಾರ್ಡ್‌ನ ಅಂಗಡಿಗಳಲ್ಲಿ ಖರೀದಿ ಮಾಡಿದ್ದ. ಟೇಪ್, ಕೆಮಿಕಲ್, ಗೋಣಿಚೀಲ ಸೇರಿ ಇತರೆ ವಸ್ತುಗಳನ್ನು ಖರೀದಿ ಮಾಡಿದ್ದು, ಆ ಅಂಗಡಿಗಳಿಗೆ ತೆರಳಿರುವ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಅಂಗಡಿಯ ಮಾಲೀಕರ ಮತ್ತು ಸಿಬ್ಬಂದಿಯಿಂದ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.
ಪ್ರಕರಣದ ತನಿಖೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಶವಗಳ ಹುಡುಕಾಟ, ಮತ್ತೊಂದು ತಂಡದಿಂದ ಅಪ್ರಾಪ್ತೆ ಮಗಳ ವಿಚಾರಣೆ ನಡೆಸಿದೆ. ಇನ್ನೊಂದು ತಂಡ ಪ್ರಕರಣದ ಪೇಪರ್ ವರ್ಕ್ ಮಾಡುತ್ತಿದೆ. ಮಗದೊಂದು ತಂಡ ಕೊಲೆಗೆ ಬಳಸಿದ್ದ ವಸ್ತುಗಳ ಖರೀದಿ ಬಗ್ಗೆ ತನಿಖೆ ನಡೆಸುತ್ತಿದೆ. ಈ ಪ್ರಕರಣ ತನಿಖೆಯನ್ನು ಡಿಸಿಪಿ ನೇಮಗೌಡ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ರಾಜಾಜಿನಗರದ ಮನೆಯೊಂದರಲ್ಲಿ ಸುಮಾರು 2 ವಾರಗಳ ಅವಧಿಯಲ್ಲಿ ಆರೋಪಿ ಇಂದುಶೇಖರ್ ತನ್ನ ಪತ್ನಿ ಪರಿವಾರದ 7 ಮಂದಿಯ ಹತ್ಯೆ ಮಾಡಿದ್ದ. ಕುಟುಂಬದ ಸದಸ್ಯರು ಪದೇಪದೇ ಕರೆ ಮಾಡಿದರೂ ಯಾರೊಬ್ಬರು ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ನಳಿನಿ ಅವರ ತಾಯಿ ತುಂಗಮ್ಮ ಅವರು ನಾಪತ್ತೆ ದೂರು ದಾಖಲಿಸಿದ್ದರು. ಈ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅ.14 ರಿಂದ ನ.3ರವರೆಗೂ ಸುಮಾರು 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಮೃತದೇಹಗಳನ್ನು ಸಾಗಿಸಿರುವ ಪ್ರಮುಖ ಜಿಲ್ಲೆಗಳ ಎಂಟ್ರಿಯ ಟೋಲ್‌ಗಳ ಮತ್ತು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ಬೆಳಗ್ಗೆ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಪುನೀತ್(7) ಮೃತದೇಹ ಪತ್ತೆ. ಶನಿವಾರ ಮಧ್ಯಾಹ್ನ: ತಮಿಳುನಾಡಿನ ಸೇಲಂ ಜಿಲ್ಲೆಯ ಯೇರ್ಕಾಡ್ ಅರಣ್ಯ ಪ್ರದೇಶದಲ್ಲಿ ಇಂದುಶೇಖರ್ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿ ಮೃತದೇಹ ಪತ್ತೆ. ಭಾನುವಾರ ಮಧ್ಯಾಹ್ನ: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ಅವರ ಪತ್ನಿ ದಿವ್ಯಾ ಮೃತದೇಹಗಳು ಪತ್ತೆ. ಸೋಮವಾರ ಮಧ್ಯಾಹ್ನ: ಹಾಸನ ಜಿಲ್ಲೆಯ ಶಿರಾಡಿ ಘಾಟ್‌ನ ಅರಣ್ಯ ಪ್ರದೇಶದಲ್ಲಿ ಶಂಕರ್ ಮತ್ತು ಅವರ ಪತ್ನಿ ನಳಿನಿ ಮೃತದೇಹಗಳ ಪತ್ತೆ.
ಆರೋಪಿ ಇಂದುಶೇಖರ್ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿ ಮತ್ತು ಬಾಲಕ ಪುನೀತ್ ಅವರ ಶವದ ಅಂತ್ಯಸಂಸ್ಕಾರವನ್ನು ಭಾನುವಾರ ಕುಟುಂಬಸ್ಥರು ನೆರವೇರಿಸಿದ್ದರು. ಸೋಮವಾರ ಶಿವಕುಮಾರ್ ಮತ್ತು ದಿವ್ಯ ಅವರ ಅಂತ್ಯ ಸಂಸ್ಕಾರವನ್ನು ಸೋಮವಾರ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಉಳಿದ 2 ಮೃತದೇಹಗಳ ಅಂತ್ಯಸಂಸ್ಕಾರವನ್ನು ಕುಟುಂಬದ ಸದಸ್ಯರು ನಡೆಸಲಿದ್ದಾರೆ.
ಮೃತರ ಕುಟುಂಬದ ವಿವರಸುನೀತಾ: ಆರೋಪಿ ಇಂದುಶೇಖರ್ ಅವರ ಪತ್ನಿ.
ರೂಪಾವತಿ: ಆರೋಪಿ ಇಂದುಶೇಖರ್ ಅತ್ತೆಶಿವಕುಮಾರ್, ದಿವ್ಯಾ: ಆರೋಪಿಯ ದೊಡ್ಡ ಬಾಮೈದ ಮತ್ತು ಈತನ ಪತ್ನಿ
ಶಂಕರ್, ನಳಿನಿ: ಆರೋಪಿಯ ಚಿಕ್ಕ ಬಾಮೈದ ಮತ್ತು ಈತನ ಪತ್ನಿಪುನೀತ್ –ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಏಕೈಕ ಪುತ್ರ
ಬಾಲಕನ ಬಳಿ ಸುಳ್ಳು ಹೇಳಿಸಿದ್ರು ಕೊಲೆಯಾದ ಶಂಕರ್ ಮತ್ತು ನಳಿನಿ ದಂಪತಿಯ 10 ವರ್ಷದ ಪುತ್ರನಿಗೆ ಆರೋಪಿ ಇಂದು ಶೇಖರ್, ಅಪ್ಪ-ಅಮ್ಮ ತೀರ್ಥಯಾತ್ರೆಗೆ ಹೋಗಿದ್ದಾರೆ. 3 ತಿಂಗಳ ಕಾಲ ಉತ್ತರ ಭಾರತದಲ್ಲೇ ಇರುತ್ತಾರೆ ಎಂದು ಸಂಬಂಧಿಕರು, ಸ್ನೇಹಿತರಿಗೆ ಸುಳ್ಳು ಹೇಳುವಂತ ಒತ್ತಾಯಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.ಬಾಲಕ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ತಂದೆ ತಾಯಿ ಕಾಣಿಸುತ್ತಿಲ್ಲ ಎಲ್ಲಿ ಹೋಗಿದ್ದಾರೆ ಎಂದು ಬಾಲಕ ಪ್ರಶ್ನಿಸಿದ್ದ. ಆಗ ಆರೋಪಿ ಇಂದುಶೇಖರ್, ಅವರು ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾರೆ. ನಾವು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೋಗೋಣ ಎಂದು ಬಾಲಕನನ್ನು ತಮ್ಮ ಜತೆ ಕರೆದೊಯ್ದಿದ್ದಾನೆ. ನಂತರ ಕಾರಿನಲ್ಲೇ ಬಾಲಕ ಕೈಯಿಂದ ಆಡಿಯೋ ರೆಕಾರ್ಡ್ ಮಾಡಿಸಿದ ಆರೋಪಿ, ಶಂಕರ್ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದ. ಆತನಿಗೆ ನೇರವಾಗಿ ಮಾತನಾಡಲು ಬಿಡದೆ, ಮೊಬೈಲ್ ಫೋನ್‌ಗಳನ್ನು ಆತನ ಕೈಗೆ ನೀಡಿ ಧ್ವನಿ ಸಂದೇಶಗಳನ್ನು ರೆಕಾರ್ಡ್ ಮಾಡಿಸಿಕೊಂಡಿದ್ದ. ಆದರೆ, ಅದನ್ನು ಕಳುಹಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.
ಅಪ್ಪ ಅಮ್ಮನ ಶವದೊಂದಿಗೆ ಇದ್ದ ಬಾಲಕಕಾರಿನಲ್ಲಿ ತನ್ನದೇ ಅಪ್ಪ-ಅಮ್ಮನ ಶವ ಸಾಗಿಸುತ್ತಿರುವ ವಿಚಾರ ತಿಳಿಯದ ಬಾಲಕ, ಯಾವುದು ಈ ಮೂಟೆಗಳು,ಇದರಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಆರೋಪಿ ಮತ್ತು ಆಕೆಯ ಪುತ್ರಿಗೆ ಕೇಳಿದ್ದಾನೆ. ಆಗ ಆರೋಪಿ ತುಂಬ ಕಸ ಇತ್ತು. ಹೀಗಾಗಿ ಅದನ್ನು ಕಾರಿನಲ್ಲಿ ಸಾಗಿಸಲಾಗುತ್ತಿದೆ ಅದರಿಂದ ವಾಸನೆ ಬರುತ್ತಿದೆ ಎಂದು ಹೇಳಿ ಸುಮ್ಮನಿರಿಸಿದ್ದಾರೆ. ನಂತರ ಶಿರಾಡಿಘಾಟ್‌ನಲ್ಲಿ ಅವುಗಳನ್ನು ಎಸೆದು ಪರಾರಿಯಾಗಿದ್ದನು ಎಂದು ಮೂಲಗಳು ತಿಳಿಸಿವೆ.