ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕಡಿಯತ್ತೂರಿನ ಬಳಿಯ ದೋಣಿ ಕಡವು ಕಾವೇರಿ ನದಿ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದ ಅಯ್ಯಪ್ಪ (18) ಮೃತ ದೇಹ ಮಂಗಳವಾರ ಪತ್ತೆ ಆಗಿದೆ.ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡುವು ಎಂಬಲ್ಲಿ ಸ್ನೇಹಿತರೊಂದಿಗೆ ಕಾವೇರಿ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರು ದೋಣಿಯಲ್ಲಿ ತೆರಳುವ ಸಂದರ್ಭ ಅಚಾನಕ್ಕಾಗಿ ದೋಣಿ ಮಗುಚಿ ದುರ್ಘಟನೆ ಸೋಮವಾರ ಜರುಗಿತ್ತು.
ಐವತ್ತೋಕ್ಲು ಗ್ರಾಮದ ಚಾರಂಡ ಕಾಲೋನಿ ನಿವಾಸಿ ಪರಮೇಶ (ಪುಟ್ಟ) ಮತ್ತು ವಿಮಲಾ ದಂಪತಿಗಳ ಪುತ್ರ ಗಿರೀಶ್ (16) ಹಾಗೂ ಚೇರಂಬಾಣೆ ಬಳಿಯ ಪಾಕ ನಿವಾಸಿ ವಿಠಲ ಹಾಗೂ ವೀಣಾ ದಂಪತಿಗಳ ಪುತ್ರ ಅಯ್ಯಪ್ಪ (18) ಇಬ್ಬರೂ ನೀರಲ್ಲಿ ಮುಳುಗಿ ಕಾಣೆಯಾಗಿದ್ದರು.ಸ್ಥಳದಲ್ಲಿ ಪೊಲೀಸ್, ಅಗ್ನಿಶಾಮಕ ಹಾಗೂ ಗೃಹ ರಕ್ಷಕ ಸಿಬ್ಬಂದಿ ಸೋಮವಾರ ಗಿರೀಶ್ (16) ಮೃತ ದೇಹ ನೀರಿನಿಂದ ಹೊರ ತೆಗೆದಿದ್ದು ಅಯ್ಯಪ್ಪ (18) ಯುವಕನ ಮೃತದೇಹಕ್ಕೆ ನದಿಯಲ್ಲಿ ಶೋಧ ಕಾರ್ಯಕ್ಕೆ ಪ್ರತಿಕೂಲ ಹವಾಮಾನ ಉಂಟಾದ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು .
ನಾಪೋಕ್ಲು ಪೊಲೀಸರು ಅಗ್ನಿಶಾಮಕದಳ ಹಾಗೂ ಸ್ಥಳೀಯರು ಅಯ್ಯಪ್ಪ ಎಂಬ ಯುವಕನ ಮೃತ ದೇಹ ಪತ್ತೆಗಾಗಿ ಮಂಗಳವಾರ ಬೆಳಗ್ಗಿನಿಂದಲೇ ಶೋಧ ಕಾರ್ಯ ಮುಂದುವರಿಸಿದ್ದರು.ಸೋಮವಾರ ಅವಘಡ ಸಂಭವಿಸಿದ ಕಾವೇರಿನದಿಯ ಸುಮಾರು 15 ಅಡಿ ಆಳದಲ್ಲಿ ಮೃತ ಯುವಕ ಅಯ್ಯಪ್ಪನ ಮೃತ ದೇಹವನ್ನು ಪೊಲೀಸರು, ಅಗ್ನಿಶಾಮಕ ದಳ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್, ಉಬೈದ್, ಮತ್ತು ಮುಳುಗು ತಜ್ಞ ಮೂರ್ನಾಡು ನಿವಾಸಿ ಎಂ. ಆರ್. ಬಿಪಿನ್, ಜುಬೇರ್, ಇಬ್ರಾಹಿಂ, ಅಬ್ದುಲ್, ಅಬ್ದುಲ್ ರೆಹಮಾನ್ , ಮುತ್ತಪ್ಪ ಇನ್ನಿತರರ ನೆರವಿನಿಂದ ಶವಗಳನ್ನು ಪತ್ತೆ ಹಚ್ಚಿ ಮೇಲೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಠಾಣಾಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿ ಕೇಸು ದಾಖಲಿಸಿಕೊಂಡು ಕಾನೂನಿನ ಕ್ರಮ ಕೈಗೊಂಡಿದ್ದಾರೆ.-------------------------------
ಸಹೋದರರಿಗೆ ಗುಂಡೇಟು!ಕನ್ನಡಪ್ರಭ ವಾರ್ತೆ ಪೊನ್ನಂಪೇಟೆಆಸ್ತಿ ವಿಚಾರಕ್ಕಾಗಿ ನಡೆದಿರುವ ಕಲಹಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರಿಗೆ ಗುಂಡು ಹಾರಿಸಲಾಗಿದೆ.ಕೊಡಗು ಜಿಲ್ಲೆಯ ಪೊನ್ನಂಪೇಟೆ ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಬಾಳೇರ ಪೂವಪ್ಪ ಅವರ ಪುತ್ರರಾದಬಾಳೇರ ಸಚಿನ್ (43) ಹಾಗೂ ಬಾಳೇರ ರೋಷನ್ (35) ರವರಿಗೆ ಬಾಳೇರ ಟಿಮ್ಸ ಎಂಬುವರು ಗುಂಡು ಹೊಡೆದಿದ್ದಾರೆ.ಆಸ್ತಿ ವಿಚಾರವಾಗಿ ಹಿಂದಿನಿಂದಲೂ ಕಲಹ ನಡೆಯುತ್ತಿದೆ ಎನ್ನಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.ಸಚಿನ್ ಅವರ ತೊಡೆ ಭಾಗಕ್ಕೂ ಹಾಗೂ ರೋಷನ್ ಅವರ ಕುತ್ತಿಗೆ ಭಾಗಕ್ಕೆ ಗುಂಡೇಟು ತಗುಲಿದೆ. ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.