ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಜೀವನವನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಂಡಾಗ ಈ ಜೀವನದ ಗೆಲುವು ಮತ್ತು ಸಾಧನೆ ನಮ್ಮದಾಗುತ್ತದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.ಭಾನುವಾರ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್, ಸಂತ ಅಂತೋಣಿಯವರ ದೇವಾಲಯ ಇವರ ಸಂಯುಕ್ತಾಶ್ರಯದಲ್ಲಿ 14ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಮತ್ತು ಇತರ ಕ್ರೀಡಾಕೂಟಗಳು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳಿಗೆ ಮತ್ತು ಯುವಜನತೆಗೆ ಸೋಲನ್ನು ಕಲಿಸಬೇಕು ಗೆಲುವು ಸದಾಸಿಗುವ ವಸ್ತುವಲ್ಲ ಎಂಬ ನಿಲುವನ್ನು ಕಲಿಸಿಕೊಡಬೇಕು. ಸೋತು ಗೆಲ್ಲುವ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು ಪ್ರಸ್ತುತ ದಿನಗಳಲ್ಲಿ ಕ್ರೀಡಾಮನೋಭಾವದಿಂದ ಜೀವನವನ್ನು ಎದುರಿಸಿ ಗೆಲ್ಲುವುದನ್ನು ಕಲಿಯಿರಿ ಎಂದು ಪೊನ್ನಣ್ಣ ಹೇಳಿದರು.
ಕಳೆದ 14 ವರ್ಷಗಳಿಂದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅವರು ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಸಂಘಟನೆಯಿಂದ ಯಶಸ್ವಿ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ವಿಚಾರ. ಗ್ರಾಮೀಣ ಭಾಗದಲ್ಲಿ ಅಥವಾ ನಗರ ಪ್ರದೇಶದಲ್ಲಿ ಕ್ರೀಡಾಕೂಟದ ಮೂಲಕ ಸಂಘಟಿತರಾಗಿ ಒಬ್ಬರಿಗೊಬ್ಬರು ಸಹಕರಿಸಿಕೊಳ್ಳುತ್ತಿರುವುದು ಒಳ್ಳೆಯ ಸಂಸ್ಕೃತಿ ಮತ್ತು ಬೆಳವಣಿಗೆ ಎಂದು ಪ್ರಶಂಸಿಸಿದ ಅವರು ನನ್ನನು ಕರೆದು ಸನ್ಮಾನಿಸಿರುವುದಕ್ಕೆ ಅಭಾರಿಯಾಗಿದ್ದೇನೆ. ಈ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಸೇರಿ ನಿಮ್ಮ ಬೇಕು ಬೇಡಿಕೆಗಳ ಈಡೇರಿಕೆಯ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪೊನ್ನಣ್ಣ ದೃಢವಾಗಿ ನುಡಿದರು.ಸಮಾನಮನಸ್ಕರಾಗಿ ಕೆಲಸ ಮಾಡಿದರೆ ಯಶಸ್ಸು:
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ರೇ.ಫಾ.ವಿಜಯಕುಮಾರ್ ಆಶೀರ್ವಚನ ನೀಡಿ ಕ್ರೀಡಾಕೂಟ ಯಶಸ್ವಿಯಾಗಿದ್ದು ಸಂಘಟನೆಯಲ್ಲಿ ಒಗ್ಗಟ್ಟಿದ್ದು ಸಮಾನಮನಸ್ಕರಾಗಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂಬುದನ್ನು ಪ್ರತಿವರ್ಷದ ಕ್ರೀಡಾ ಕೂಟ ನಿರೂಪಿಸಿದೆ ಎಂದು ಅವರು ಬಣ್ಣಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಲಾಗಿದ್ದು ಸಸ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಡಾ. ನಿಲನ ಜೇಮ್ಸ್, ಎಂಬಿಬಿಎಸ್‌ನಲ್ಲಿ ಉನ್ನತ ಅಂಕ ಪಡೆದ ಡಾ. ಅನ್‌ಲಿಷಾ, ನಾಟಿ ವೈದ್ಯರಾದ ಜಾನ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ, ಅತಿ ಹೆಚ್ಚು ಅಂಕಗಳಿಸಿದ ಕ್ರೈಸ್ತ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.ಜಿಲ್ಲೆಯಾದ್ಯಂತ 22 ತಂಡಗಳು ಭಾಗಿ
ಕ್ರೀಡಾಕೂಟದಲ್ಲಿ ಜಿಲ್ಲೆಯಾದ್ಯಂತ 22 ತಂಡಗಳು ಪಾಲ್ಗೊಂಡಿದ್ದು ಫೈನಲ್ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ತಂಡವು ಸೋಮವಾರಪೇಟೆ ಗೋಪಾಲಾಪುರ ತಂಡವನ್ನು ಸೋಲಿಸುವ ಮೂಲಕ ರೋಮನ್ ಕ್ಯಾಥೋಲಿಕ್ ಕಪ್ ಅನ್ನು ಮುಡಿಗೇರಿಸಿಕೊಂಡಿತು. ತೃತೀಯ ಸ್ಥಾನವನ್ನು ಸಿದ್ಧಾಪುರ ಸೈಂಟ್ ಪೊರೆನ್ಸ್ ದೇವಾಲಯ ತಂಡವು ಪಡೆದರೆ, ನಾಲ್ಕನೇ ಆಮ್ಮತ್ತಿ ಸಂತ ಅಂತೋಣಿ ದೇವಾಲಯದ ಎ. ತಂಡವು ಪಡೆದುಕೊಂಡವು.ಮಹಿಳೆಯರಿಗಾಗಿ ಏರ್ಪಡಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 10 ತಂಡಗಳು ಪಾಲ್ಗೊಂಡಿದ್ದು, ಅಬ್ಬೂರುಕಟ್ಟೆಯ ಸೈಂಟ್ ಲಾರೆನ್ಸ್ ತಂಡವು ಮಡಿಕೇರಿ ಸಂತ ಮೈಕಲರ ತಂಡವನ್ನು ಸೋಲಿಸಿ ಪ್ರಥಮಸ್ಥಾನವನ್ನು ಪಡೆಯಿತು.
ಪುರುಷರ ಹಗ್ಗಜಗ್ಗಾಟದಲ್ಲಿ ಅಬ್ಬೂಕಟ್ಟೆ ತಂಡವು ಪೊನ್ನಂಪೇಟೆ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು.ಮಹಿಳೆಯರ ವಿಭಾಗದಲ್ಲಿ ಹೆಗ್ಗಳ ಸೆಂಟ್ ಝಾನ್ ತಂಡವು ಪ್ರಥಮ ಸ್ಥಾನ ಮಡಿಕೇರಿಯ ಸಂತ ಮೈಕಲರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಸಮಾರಂಭದ ವೇದಿಕೆಯಲ್ಲಿ ವಿರಾಜಪೇಟೆ ವಲಯದ ಶ್ರೇಷ್ಠ ಗುರುಗಳಾದ ಸಂತ ಅನ್ನಮ್ಮ ದೇವಾಲಯದ ರೇ.ಪಾ. ಜೇಮ್ಸ್ ಡಾಮಿನಿಕ್, ಆಮ್ಮತ್ತಿ ದೇವಾಲಯದ ಧರ್ಮಗುರುಗಳಾದ ಮದಲೈಮುತ್ತು, ಚೆಟ್ಟಳ್ಳಿ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ರೇ.ಪಾ.ಜೆರಾಲ್ಡ್ ಸೀಕ್ವಾರ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜೋವಿಟಾ ವಾಝ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳ ರಾಜ್ಯ ಉಪಾಧ್ಯಕ್ಷ ಟಿ.ಕೆ.ಸಾಯಿಕುಮಾರ್, ಗ್ರಾ.ಪಂ.ಸದಸ್ಯ ಜೀನಾಸುದ್ದೀನ್, ಪ್ರಗತಿ ಪರ ಕೃಷಿಕರಾದ ಎಂ.ಟಿ.ಬೇಬಿ, ಸಂತ ಅಂತೋಣಿ ದೇವಾಲಯದ ಕ್ರೀಡಾ ಆರ್ಥಿಕ ಸಮಿತಿ ಅಧ್ಯಕ್ಷ ಪಿ.ಎಂ.ಬಿಜು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಕೀಂ, ಸುಂಟಿಕೊಪ್ಪ ಸ.ಮಾ.ಪ್ರಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಯು ರಫೀಕ್‌ಖಾನ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಜೋಕಿಂ ವಾಝ್, ಜೋಕಿಂ ರಾಡ್ರಿಗಸ್, ಯೇಸುದಾಸ್, ಕಾರ್ಯದರ್ಶಿ ಜೂಡಿವಾಝ್, ಖಜಾಂಜಿ ಜೇಮ್ಸ್ ಡಿ’ಸೋಜ, ಮಹಿಳಾ ಘಟಕದ ಅಧ್ಯಕ್ಷ ಪಿಲೋಮಿನಾ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಹಾಗೂ ಮಹಿಳಾ ಘಟಕಗಳ ಸದಸ್ಯರಾದ ರೋಸ್‌ಮೇರಿ ರಾಡ್ರಿಗಸ್, ಗ್ರೇಸಿ ಡೇವಿಡ್, ಗೌರವ ಸಲಹೆಗಾರರಾದ ಎಸ್.ಎಂ.ಡಿಸಿಲ್ವ, ರ‍್ವಿನ್ ಲೋಬೋ, ಆಗಸ್ಟಿನ್ ಜಯರಾಜ್, ಅಂತೋಣಿ ಡಿ’ಸೋಜ, ಪಿ.ಎಫ್.ಸಬಾಸ್ಟೀನ್, ಡೆನ್ನಿ ಬರೋಸ್, ಪಿಲಿಫ್ ವಾಸ್, ಯುವಘಟಕದ ಅಧ್ಯಕ್ಷ ಬಬುಲು, ರೋನಾಲ್ಡ್ ರಾಡ್ರಿಗಸ್ ಮತ್ತಿತರರು ಇದ್ದರು.