ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಧಿಕಾರಿ ಡಾ.ಕುಮಾರ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಹಾಗೂ ಕಾರ್ಖಾನೆ ವ್ಯವಸ್ಥಾಪಕ ಮಂಗಲ್ ದಾಸ್ ಅವರು ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡಿದರು. ಬಳಿಕ ಕಾರ್ಖಾನೆ ಎ ಮಿಲ್‌ಗೆ ಕಬ್ಬನ್ನು ಹಾಕುವ ಮೂಲಕ ಜುಲೈ 15ರಂದು ಕಬ್ಬು ಅರೆಯುವಿಕೆ ಪ್ರಾರಂಭಕ್ಕೆ ಸಾಂದರ್ಭಿಕವಾಗಿ ಚಾಲನೆ ನೀಡಿದರು.
ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ 2026-27ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಜು.10ರಿಂದ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಅದರಂತೆ ಕಳೆದ 20 ದಿನಗಳಿಂದ ಕ್ರಷಿಂಗ್ ಆರಂಭಕ್ಕೆ ಪೂರಕವಾಗಿ ಕಾರ್ಖಾನೆ ಸಜ್ಜುಗೊಳಿಸುವ ಕೆಲಸ ನಡೆದಿತ್ತು.ಒಂದಷ್ಟು ಸಮಸ್ಯೆಗಳನ್ನು ನಿವಾರಿಸಿಕೊಂಡು ಬಾಯ್ಲರ್ ಮತ್ತು ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ ಓವರ್ ಆಯಿಲ್ ಮಾಡಿಸಲಾಗಿತ್ತು. ಅಂತಿಮವಾಗಿ ಬುಧವಾರ(ಜು.8) ಕಾರ್ಖಾನೆಗೆ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಯಿತು. ಇದಕ್ಕೂ ಮುನ್ನ ಬಾಯ್ಲರ್ ಘಟಕದ ಆವರಣದಲ್ಲಿ ವಿಶೇಷ ಪೂಜೆ ಮತ್ತು ನಾನಾ ಧಾರ್ಮಿಕ ವಿವಿಧಾನಗಳನ್ನು ನೆರವೇರಿಸಿ ವಿಘ್ನನಿವಾರಕ ಗಣೇಶನನ್ನು ಪ್ರಾರ್ಥಿಸಲಾಯಿತು.
ಪ್ರತಿನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಎ ಮಿಲ್ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 5.44 ಲಕ್ಷ ಟನ್ ಕಬ್ಬನ್ನು ರೈತರಿಂದ ಒಪ್ಪಿಗೆ ಮಾಡಿಕೊಳ್ಳಲಾಗಿದೆ. ನವೆಂಬರ್ ಅಂತ್ಯದೊಳಗೆ ಎಲ್ಲ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರದ ಆದೇಶದಂತೆ 50 ರೂ. ಪ್ರೋತ್ಸಾಹ ಧನದ ಚೆಕ್ ಅನ್ನು ವಿತರಿಸಲಾಯಿತು.
ಪ್ರೋತ್ಸಾಹ ಧನ ನೀಡದ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬೇಡಿ: ಡೀಸಿ
ಸರ್ಕಾರ ಭರವಸೆ ನೀಡಿದಂತೆ ಕಳೆದ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 50 ರು. ಪ್ರೋತ್ಸಾಹ ಧನ ನೀಡಿದೆ. ಬಾಕಿ ಹಣ ನೀಡುವವರೆಗೂ ಕಬ್ಬು ಬೆಳೆಗಾರರು ನಿಮ್ಮ ವ್ಯಾಪ್ತಿಯ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ಖಾಸಗಿ ಕಾರ್ಖಾನೆಯವರು ಸರ್ಕಾರದ ಆದೇಶಕ್ಕೆ ಮನ್ನಣೆ ನೀಡದೆ ರೈತರಿಗೆ ವಂಚನೆ ಮಾಡಿವೆ. ಇಂದಿನವರೆಗೂ 50 ರು ಪ್ರೋತ್ಸಾಹ ಧನ ನೀಡುವ ಮನಸ್ಸು ಮಾಡಿಲ್ಲ. ಒಂದು ವೇಳೆ ಕಬ್ಬು ಸರಬರಾಜು ಮಾಡಿದರೆ 50 ರು.ಗಳನ್ನು ನೀಡವುದಿಲ್ಲ. ಕಬ್ಬು ಸರಬರಾಜು ಮಾಡುವ ಬದಲು 50 ರು. ಪ್ರೋತ್ಸಾಹ ಧನವನ್ನು ಮೊದಲು ಕೊಡಿ ಎಂದು ಒತ್ತಾಯ ಮಾಡಿ. ಕೊಡದಿದ್ದಲ್ಲಿ ಯಾವುದೇ ಕಾರಣಕ್ಕೂ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬೇಡಿ ಎಂದು ಮನವಿ ಮಾಡಿದರು.