ಗದಗ: ನಗರದ ಜಿಲ್ಲಾಧಿಕಾರಿ ಕಚೇರಿಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆಯ ಇ- ಮೇಲ್ ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದು ಸ್ಥಳಕ್ಕೆ ಶ್ವಾನದಳದೊಂದಿಗೆ ಬಾಂಬ್ ಸ್ಕ್ಯಾಡ್ ದೌಡಾಯಿಸಿ ಜಿಲ್ಲಾಡಳಿತ ಭವನದ ಇಂಚಿಂಚೂ ಜಾಗದ ಶೋಧ ನಡೆಸಿದರು. ಜಿಲ್ಲಾಧಿಕಾರಿಗಳ ಕೊಠಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪರಿಶೀಲಿಸಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಜಿಲ್ಲಾಡಳಿತ ಭವನದಲ್ಲಿ ವಿವಿಧ ಕಚೇರಿಗಳ ಪರಿಶೀಲನೆ ನಡೆಸಲಾಗಿದ್ದು, ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದಾಗಿ ಇದೊಂದು ಹುಸಿ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಇದು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಬಾಂಬ್ ಬೆದರಿಕೆಗಳ ಭಾಗವಾಗಿರಬಹುದು ಎನ್ನಲಾಗಿದೆ. ತಮಿಳುನಾಡು ಚುನಾವಣೆ ಸಮಯದಲ್ಲಿ ಗಮನ ಬೇರೆಡೆ ಸೆಳೆಯುವ ಯತ್ನ ಇದಾಗಿರಬಹುದು ಎನ್ನಲಾಗಿದೆ. ತಮಿಳುನಾಡಿನ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಸೇರಿ ಪಾಕಿಸ್ತಾನ ಐಎಸ್‌ಐ ಸಂಸ್ಥೆ ಸ್ಫೋಟಿಸಲು ಸಂಚು ಎಂದು ಈ ಮೇಲ್‌ನಲ್ಲಿ ಬರೆಯಲಾಗಿದೆ.ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐಗಳಾದ ಲಾಲ್‌ಸಾಬ್ ಜೂಲಕಟ್ಟಿ, ಸಿದ್ದರಾಮೇಶ, ಪಿಎಸ್‌ಐ ವಿ.ಜಿ. ಪವಾರ ಸೇರಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.