ಬೂದಿ, ಹೊಗೆ, ವಿಷಾನಿಲದಿಂದ ಬದುಕು ಹಾಳು: ಶರಣಬಸನಗೌಡ ಹೊರಪೇಟೆ

KannadaprabhaNewsNetwork |  
Published : Dec 16, 2025, 02:15 AM IST
15ಕೆಪಿಎಲ್29 ಬಲ್ಡೋಟಾ ಕಾರ್ಖಾನೆ ವಿರೋಧಿಸಿ ನಡೆಯತ್ತಿರುವ ಧರಣಿಗೆ ದಳಪತಿ ಸಂಘಟನೆಗಳು ಬೆಂಬಲ ನೀಡಿತು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಕೊಪ್ಪಳ ಪಕ್ಕದಲ್ಲಿ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಧರಣಿ ೪೬ನೇ ದಿನದ ಧರಣಿಯಲ್ಲಿ ದಳಪತಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕೊಪ್ಪಳ: ಜನರ ಆರೋಗ್ಯ ಹಾಳಾದರೂ ಸರಿ ತಮ್ಮ ಖಜಾನೆ ತುಂಬಬೇಕು ಎನ್ನುವ ರಾಜಕಾರಣಿಗಳಿದ್ದಾರೆ. ಜನಪರವಾಗಿ ನಿಲ್ಲಲು ನಿಷ್ಠುರತೆ ಬೇಕು. ಬೂದಿ, ಹೊಗೆ, ವಿಷಾನಿಲದಿಂದ ಬದುಕು ಹಾಳಾಗಿದೆ ಎಂದು ದಳಪತಿ ಸಂಘದ ಅಧ್ಯಕ್ಷ ಶರಣಬಸನಗೌಡ ಹೊರಪೇಟೆ ಹೇಳಿದರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಕೊಪ್ಪಳ ಪಕ್ಕದಲ್ಲಿ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಧರಣಿ ೪೬ನೇ ದಿನ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜನರ ಆರೋಗ್ಯ ಕಾಪಾಡದಿದ್ದರೆ ಅದ್ಯಾವ ಅಭಿವೃದ್ಧಿ? ಅಂಥ ಅಭಿವೃದ್ಧಿ ಅಭಿವೃದ್ಧಿಯೇ ಅಲ್ಲ. ಆದ್ದರಿಂದ ಜನವಸತಿ ಪ್ರದೇಶದಿಂದ ಕೈಗಾರಿಕೆಗಳನ್ನು ದೂರು ಇಡಬೇಕು ಎಂದರು.

ರೈತ ಮುಖಂಡ ಶರಣಗೌಡ ಪಾಟೀಲ ಮಾತನಾಡಿ, ಮುದ್ದಾಬಳ್ಳಿ ಕಂಪನಿಗಳಿಗೆ ಕಡಿವಾಣ ಹಾಕಬೇಕು. ಅವರ ಉಪಟಳ ವಿಪರೀತವಾಗಿದೆ. ಅಲ್ಲಿ ಕೆಲಸ ಮಾಡುವವರು ನಮ್ಮ ಜನರೇ ಅಲ್ಲ. ಇನ್ನು ಬಲ್ಡೋಟಾ ಪೆಲೆಟ್ ಪ್ಲಾಂಟ್ ಆರಂಭವಾಗಿ ೧೦ ವರ್ಷ ಆಗಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಅಂದೇ ಅವರು ಕೆಲಸ ಕೊಡಬೇಕಿತ್ತು. ಅದೇ ಕಾರ್ಖಾನೆ ಮಾಲೀಕರು ಇಷ್ಟು ವರ್ಷ ಚಳ್ಳೆಹಣ್ಣು ತಿನ್ನಿಸಿ, ಈಗ ರೈತರ ಸೋಗಿನಲ್ಲಿ ತಮ್ಮವರನ್ನೇ ನಿಲ್ಲಿಸಿ ಕಂಪನಿ ಪರವಾಗಿ ಹೋರಾಟ ಮಾಡಿಸುತ್ತಿದ್ದಾರೆ. ಜನರಿಗೆ ಅವರ ನಾಟಕ ಗೊತ್ತಿದೆ. ಸರ್ಕಾರಕ್ಕೂ ಅದನ್ನೇ ಹೇಳುತ್ತೇವೆ. ಮತ್ತೊಂದು ಕ್ರಾಂತಿಕಾರಕ ಹೋರಾಟ ಆಗುವ ಮುನ್ನ ಎಚ್ಚರಗೊಂಡು ಜನರ ಸಮಸ್ಯೆಗೆ ಸ್ಪಂದಿಸಲಿ ಎಂದರು.

ದಳಪತಿ ಕಲ್ಲನಗೌಡ ಮಾತನಾಡಿ, ಬೂದಿಯಿಂದ ರೇಷ್ಮೆ, ಬಾಳೆ ಬೆಳೆಯುವುದು ನಿಲ್ಲಿಸಲಾಯಿತು. ಅದರ ವಿಷಕಾರಿ ಅಂಶ ಮತ್ತು ಬೂದಿಯಿಂದ ನಷ್ಟ ಅನುಭವಿಸಿ ಸಾಕಾಗಿದೆ. ಅಲ್ಲಿ ಬರುವ ಬೆಳೆಗಳು ಗುಣಮಟ್ಟದಿಂದ ಕೂಡಿರಲು ಸಾಧ್ಯವಿಲ್ಲ. ಕಂಪನಿ ಪರವಾಗಿ ಇರುವವರ ಅಧ್ಯಯನ, ವರದಿಗಳು ಎಲ್ಲವೂ ಬೋಗಸ್ ಎಂದರು.

ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಚಾರಣ ಬಳಗದ ಡಾ. ಶಿವಕುಮಾರ್ ಮಾಲಿಪಾಟೀಲ್, ತಿಮ್ಮಣ್ಣ ಭೋವಿ ಬೆಂಕಿನಗರ, ವಿವಿಧ ಗ್ರಾಮದ ದಳಪತಿಗಳಾದ ದೊಡ್ಡನಗೌಡ ಮುದ್ದಲಗುಂದಿ, ಸಂಗಯ್ಯ ಕರ್ಕಿಹಳ್ಳಿ, ಬಾಲನಗೌಡ ಬೆನ್ನೂರು, ಕಲ್ಲನಗೌಡ ಮಾಸ್ತಿಕಟ್ಟಿ, ಉಮೇಶಗೌಡ ಹೂವಿನಹಾಳ, ಶರಣೇಗೌಡ ಮುದ್ದಾಬಳ್ಳಿ, ಯಮನಪ್ಪ ಕಿಡದಾಳ, ದೇವನಗೌಡ ಯ್ಯಾಟಿ, ಬಸನಗೌಡ ಕೋಳೂರು, ಸೋಮಲಿಂಗಪ್ಪ ಸಂಗನಾಳ, ಹನುಮನಗೌಡ ಹುಲಿಯಾಪುರ, ಹನುಮಗೌಡ ಬಗನಾಳ, ಸಂಗಮೇಶ ಪುರ, ಅಮರೇಗೌಡ ಮ್ಯಾದರಡೊಕ್ಕಿ, ಸಂಘಟಕರಾದ ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರ್, ಡಿ.ಎಂ. ಬಡಿಗೇರ, ಮಹಾದೇವಪ್ಪ ಮಾವಿನಮಡು, ರವಿ ಕಾಂತನವರ, ಮೂಕಣ್ಣ ಮೇಸ್ತ್ರಿ, ಎಸ್.ಬಿ. ರಾಜೂರ, ಮಖ್ಬೂಲ್ ರಾಯಚೂರು, ಭೀಮಪ್ಪ ಯಲಬುರ್ಗಾ, ಸುಭಾನ್, ಸುರೇಶ ಪೂಜಾರ, ರಮೇಶ ಬೋಚನಹಳ್ಳಿ, ಗಂಗಮ್ಮ ಕವಲೂರು ಧರಣಿಯಲ್ಲಿ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!