ಬೊಮ್ಮನಹಳ್ಳಿ ಪ್ರತ್ಯೇಕ ತಾಲೂಕು ಕೇಂದ್ರ ಮಾಡಲು ಆಗ್ರಹ

KannadaprabhaNewsNetwork |  
Published : Apr 09, 2026, 02:45 AM IST
ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯನ್ನು ಪ್ರತ್ಯೇಕ ತಾಲೂಕು ರಚಿಸುವಂತೆ ಆಗ್ರಹಿಸಿ ಉಪತಹಸೀಲ್ದಾರ್ ದೊಡ್ಡಮನಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ದೊಡ್ಡ ತಾಲೂಕುಗಳಲ್ಲಿ ಒಂದಾದ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯನ್ನು ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಅಲ್ಲಿನ ನಾಡಕಚೇರಿಯ ಉಪತಹಸೀಲ್ದಾರ್ ದೊಡ್ಡಮನಿ ಅವರ ಮೂಲಕ ಮುಖ್ಯಮಂತ್ರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.

ಹಾನಗಲ್ಲ: ದೊಡ್ಡ ತಾಲೂಕುಗಳಲ್ಲಿ ಒಂದಾದ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯನ್ನು ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಅಲ್ಲಿನ ನಾಡಕಚೇರಿಯ ಉಪತಹಸೀಲ್ದಾರ್ ದೊಡ್ಡಮನಿ ಅವರ ಮೂಲಕ ಮುಖ್ಯಮಂತ್ರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.

೧೦ ವರ್ಷಗಳಿಂದಲೂ ಪ್ರತ್ಯೇಕ ತಾಲೂಕು ರಚನೆಗಾಗಿ ಆಗ್ರಹಿಸುತ್ತಿದ್ದೇವೆ. ೨೦೧೭ರಲ್ಲಿ ಬೊಮ್ಮನಹಳ್ಳಿ ಬಂದ್ ಮಾಡಿ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ರುದ್ರಪ್ಪ ಲಮಾಣಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಬೊಮ್ಮನಹಳ್ಳಿ ನೂತನ ತಾಲೂಕು ರಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ತಾಲೂಕು ಆಡಳಿತಕ್ಕೆ ಸೂಚನೆ ಬಂದಿತ್ತು. ನನೆಗುದಿಗೆ ಬಿದ್ದಿದ್ದ ಬೊಮ್ಮನಹಳ್ಳಿ ತಾಲೂಕು ರಚನೆ ಹೋರಾಟ ಕಾರ್ಯವನ್ನು ಇದೀಗ ಮತ್ತೆ ಕೈಗೆತ್ತಿಕೊಂಡಿದ್ದೇವೆ ಎಂದು ಭಾರತೀಯ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಜೈ ಭೀಮ್ ಸಂಘಟನೆ ಮುಖಂಡರು ಹೇಳಿದರು.

ಬೊಮ್ಮನಹಳ್ಳಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮಹೇಶಗೌಡ ಪಾಟೀಲ ಮಾತನಾಡಿ, ಬೊಮ್ಮನಹಳ್ಳಿ ಹೋಬಳಿ ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಬಿದ್ದಿದೆ. ಜನಪ್ರತಿನಿಧಿಗಳು ಬೊಮ್ಮನಹಳ್ಳಿ ಭಾಗ ನಿರ್ಲಕ್ಷಿಸಿದ್ದಾರೆ. ಈ ಭಾಗದ ರೈತರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೊಮ್ಮನಹಳ್ಳಿ ಭಾಗದ ಬಗ್ಗೆ ಜನಪ್ರತಿನಿಧಿಗಳು ಸರ್ಕಾರಗಳು ನಿರ್ಲಕ್ಷ್ಯ ತೋರಿಸಿದರೆ ಬೊಮ್ಮನಹಳ್ಳಿ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಜೈ ಭೀಮ್ ಸಮತಾ ಪ್ರಬುದ್ಧ ಸಮಿತಿ ಸಂಚಾಲಕ ಚಂದ್ರಪ್ಪ ಹರಿಜನ ಮಾತನಾಡಿ, ಬೊಮ್ಮನಹಳ್ಳಿ ತಾಲೂಕು ಆಗಲು ಜನಸಂಖ್ಯೆ ಆಧಾರಿತವಾಗಿ, ಭೌಗೋಳಿಕವಾಗಿ ಎಲ್ಲ ಸಾಮರ್ಥ್ಯ ಹೊಂದಿದೆ. ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರವಾಗಿದ್ದು, ಬೊಮ್ಮನಹಳ್ಳಿ ತಾಲೂಕು ರಚನೆಯಿಂದ ಬೊಮ್ಮನಹಳ್ಳಿಯ ಸುತ್ತಮುತ್ತಲಿನ ಹತ್ತು ಕಿಲೋಮೀಟರ್ ಅಂತರದಲ್ಲಿ ೯೦ಕ್ಕೂ ಹೆಚ್ಚು ಗ್ರಾಮಗಳು ಬೊಮ್ಮನಹಳ್ಳಿ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಬೊಮ್ಮನಹಳ್ಳಿ ನೂತನ ತಾಲೂಕು ಆಗುವುದರಿಂದ ಪ್ರತ್ಯೇಕ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅನುದಾನಗಳು ಬರುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಭಾರತೀಯ ಕೃಷಿ ಕಾರ್ಮಿಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ್, ಜೈ ಭೀಮ್ ಸಮತಾ ಪ್ರಬುದ್ಧ ಸಮಿತಿಯ ಅಧ್ಯಕ್ಷ ವಿಷ್ಣು ಕೇಳಗೇರಿ, ಗ್ರಾಮದ ಮುಖಂಡರಾದ ಜಯನಗೌಡ ಪಾಟೀಲ, ನಾಗಪ್ಪ ಬಿದರಗಡ್ಡಿ, ಚಂದ್ರಶೇಖರ ಬೈಲವಾಳ, ಜಗದೀಶ ಪಾಟೀಲ, ಚನ್ನಬಸಯ್ಯ ದೊಡ್ಡಕಂತಿಮಠ, ಕುಮಾರ ನೆಲವಿಗಿ, ಶಿವಕುಮಾರಸ್ವಾಮಿ ಮಲ್ಲಿಕೇರಿಮಠ, ಕುಮಾರ ಬಂಕಾಪುರ, ಶಿವಾನಂದಪ್ಪ ಕ್ಷೌರದ, ಮಹದೇವಪ್ಪ ಹರಿಜನ, ಆನಂದ ಮೇಲಿನಮನಿ, ಬಾಪುಗೌಡ ಹಳೆಗೌಡ್ರು ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ರಚನಾತ್ಮಕ ಸಮಾಜ ಕಟ್ಟಲು ಜನಪದ ಪಾತ್ರ ಹಿರಿದು: ಡಾ. ಸಿದ್ದರಾಮ ಸ್ವಾಮೀಜಿ