ಕನ್ನಡಪ್ರಭ ವಾರ್ತೆ ರಾಮನಗರ
ನಗರದ ದ್ಯಾವರಸೇಗೌಡನದೊಡ್ಡಿಯ ತಮ್ಮ ನಿವಾಸದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತಿ ಸಮಿತಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಪುಸ್ತಕಗಳು ಚಳವಳಿ, ಹೋರಾಟಗಳಿಗೆ ಧ್ವನಿಯನ್ನು ಕೊಟ್ಟಿರುವುದನ್ನು ಕಂಡಿದ್ದೇವೆ. ಪುಸ್ತಕಗಳಲ್ಲಿ ದಾಖಲಿಸಿರುವ ಹಲವು ವಿಷಯಗಳಿಂದ ನಮ್ಮ ನಾಡಿನ ಬಹುಮುಖ ಸಂಸ್ಕೃತಿ ಆಚಾರ-ವಿಚಾರ- ಚಳವಳಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿವೆ. ಹಾಗಾಗಿ ಮನೆಗೊಂದು ಗ್ರಂಥಾಲಯ ಬಹಳ ಉಪಯುಕ್ತ ಕಾರ್ಯಕ್ರಮ. ಇದನ್ನು ನಾವೆಲ್ಲರೂ ಬೆಳೆಸಬೇಕಿದೆ ಎಂದು ಮನವಿ ಮಾಡಿದರು.
ಈಗಿನ ಧಾವಂತದ ಬದುಕಿನಲ್ಲಿ ಪುಸ್ತಕ ಓದಲು ಸಮಯ ಇಲ್ಲದಂತಾಗಿದೆ. ಇನ್ನು ಯುವಕ- ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಂಚಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಇದು ಸಲ್ಲದು, ಪುಸ್ತಕವನ್ನು ಓದುವುದು ಹವ್ಯಾಸವಾಗಬೇಕು. ಆಗ ಮಾತ್ರ ಜ್ಞಾನ , ಘನತೆ, ಗೌರವ ಹೆಚ್ಚುತ್ತದೆ. ಆದ್ದರಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ನಮ್ಮ ನಿವಾಸ ಆಯ್ಕೆ ಮಾಡಿಕೊಂಡಿರುವುದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೆ.ಶೇಷಾದ್ರಿ ಹೇಳಿದರು.‘ಮನೆಗೊಂದು ಗ್ರಂಥಾಲಯ’ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ಜ್ಞಾನ ಎಂಬುದು ಬೆಳಕಾಗಿದ್ದು, ಜ್ಞಾನದ ಬುನಾದಿಯ ಮೇಲೆ ಭಕ್ತಿಯ ಮನೆ ಕಟ್ಟಬೇಕು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜ್ಞಾನ, ಭಕ್ತಿ ರಥದ ಎರಡು ಚಕ್ರಗಳಿದ್ದಂತೆ. ಹಾಗಾಗಿ ಪ್ರತಿ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಸ್ಥಾಪಿಸುವ ಬೀಜವನ್ನು ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ. ಮನುಷ್ಯರಿಗೆ ಅರಿವಿನ ಕೊರತೆಯಿಂದ ಬೇಕಿಲ್ಲದಿರುವ ವಿಷಯಗಳು ಮೊದಲ ಆದ್ಯತೆ ಯಾಗುತ್ತಿದ್ದು, ಅತ್ಯಗತ್ಯವಾಗಿ ಬೇಕಿರುವ ಜ್ಞಾನ ನಂತರದ ಆಯ್ಕೆಯಾಗಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.
ನಮ್ಮ ಹಿರಿಯರು ಮನೆಗಳಲ್ಲಿ ಒಂದು ಪೂಜಾ ಮನೆ ಸ್ಥಾಪಿಸಿದ್ದಾರೆ. ಅದಕ್ಕೆ ಅಗರಬತ್ತಿ ಕೊಳ್ಳುವ ಸಂಪ್ರದಾಯವಿದೆ. ಅದರ ಪಕ್ಕ ಪುಸ್ತಕ ಮಾರಾಟ ಮಳಿಗೆ ಇದ್ದರೂ ಆ ಕಡೆ ಮುಖ ಮಾಡುವುದಿಲ್ಲ. ಮನೆಯಲ್ಲಿ ಪುಸ್ತಕದ ರ್‍ಯಾಕ್ ನಿರ್ಮಿಸಿದರೆ ಪುಸ್ತಕ ಖರೀದಿಗೆ ಮುಂದಾಗುವ ಸಾಧ್ಯತೆಯಿದೆ. ಆ ದೃಷ್ಟಿಯಿಂದ ಚಿಂತನೆ ನಡೆಸಿ ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಉಪನ್ಯಾಸಕಿ ಡಾ.ಎಚ್.ಎಲ್.ಪುಷ್ಪಾ ಮಾತನಾಡಿ, ಪುಸ್ತಕಗಳು ಓದುಗರ ಜ್ಞಾನ ಮತ್ತು ಜಗತ್ತನ್ನು ವಿಸ್ತರಿಸುತ್ತವೆ. ನಾವು ಓದುವ ಜೊತೆಗೆ ವಿಶೇಷವಾಗಿ ಯುವಕರಿಗೆ ಪುಸ್ತಕಗಳನ್ನು ಹಂಚಿ ಓದಿಸುವ ಕೆಲಸ ಮಾಡಬೇಕಿದೆ. ಸಮಾಜದೆಲ್ಲೆಡೆ ಪುಸ್ತಕವೇ ದೇವರು ಎಂಬ ಮಾತಾಗಬೇಕು. ಆಗ ಮಾತ್ರ ಈ ಕಾರ್ಯಕ್ರಮ ಸಾರ್ಥಕತೆ ಪಡೆಯಲಿದೆ ಎಂದು ಹೇಳಿದರು.
-----
- ಪಿ.ನಾಗರಾಜು, ಬಮೂಲ್ ನಿರ್ದೇಶಕರು.
ಸಮಾಜ ಎಲ್ಲ ಸ್ಥರಗಳಲ್ಲಿ ಮಕ್ಕಳು ಬೆಳೆದಂತೆ ಓದುವ ಗೀಳನ್ನು ಮರೆತಿದ್ದು, ಜವಾಬ್ದಾರಿಯುತವಾದ ನಾವೆಲ್ಲರೂ ಸಹ ಮಕ್ಕಳಿಗೆ ನೀತಿ ಕಥೆಗಳು ಮತ್ತು ಮೌಲ್ಯಯುತ ಪುಸ್ತಕಗಳನ್ನು ಓದಿಸುವ ಕೆಲಸ ಮಾಡಬೇಕಿದೆ. ಆಗ ಅವರಿಗೆ ನಾವು ಪಾಠ ಹೇಳಬೇಕಿಲ್ಲ, ಅವರ ಬದುಕಿನ ದಾರಿಯೇ ಬದಲಾಗುತ್ತದೆ. ಆ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಎಲ್ಲೆಡೆ ಆಂದೋಲನ ರೀತಿಯಲ್ಲಿ ಆಗಬೇಕಿದೆ.