ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಶ್ರೀ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪುಸ್ತಕ ಜನಾರ್ಪಣಾ ಕಾರ್ಯಕ್ರಮದಲ್ಲಿ ಎಸ್.ಗಂಗಾಧರಪ್ಪನವರ ಹನಿ ಜೇನು ಚುಟುಕ ಪದ್ಯಗಳ ಸಂಕಲನ ಕೃತಿ ಜನಾರ್ಪಣೆಗೊಳಿಸಿ ಮಾತನಾಡಿದ ಅವರು, ಇವತ್ತಿನ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪುಸ್ತಕಗಳ ರಚನೆ ಮತ್ತು ಪ್ರಕಟಣೆ ನಿಂತಿಲ್ಲದಿರುವುದು ಸಂತೋಷವಾದರೂ, ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ. ಓದಿಲ್ಲದೆ ಹೊಸ ಆಲೋಚನೆ, ಆವಿಷ್ಕಾರ, ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಪುಸ್ತಕಗಳನ್ನು ಬರೀ ಓದಿದರೆ ಸಾಲದು, ಅದರ ತಿರುಳನ್ನು ತಿಳಿದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೃತಿ ಕುರಿತು ಮಾತನಾಡಿದ ಆರ್ಥಿಕ ಚಿಂತಕ ಮತ್ತು ಸಾಹಿತಿ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ, ಸದಾಶಯ, ಸದಭಿಮಾನ ಮತ್ತು ಸದಭಿರುಚಿಯನ್ನು ಬೆಳೆಸುವ ಯಾವುದೇ ರೀತಿಯ ಅಭಿವ್ಯಕ್ತಿ ಒಂದಲ್ಲಾ ಒಂದು ರೀತಿಯ ಸಾಹಿತ್ಯವೋ, ಕಲೆಯೋ ಆಗಿರುತ್ತದೆ. ಅದು ಮನುಷ್ಯನ ತಲ್ಲಣಗಳಿಗೆ ಸಾಂತ್ವನವಾಗಿಯೋ, ಮುದುಡಿದ ಮನಸ್ಸಿಗೆ ಮುದ ನೀಡುವಂತಹುದೋ ಇಲ್ಲವೇ ಕತ್ತಲೆಯಿಂದ ಬೆಳಕಿಗೆ ಕೊಂಡೊಯ್ಯುವ ವಿವೇಕವನ್ನು ಜಾಗೃತಗೊಳಿಸುವಂತಹುದೋ ಆಗಿರುತ್ತದೆ. ಶುದ್ಧ ಭಾವನೆಗಳು ತೀವ್ರಗೊಂಡು ಅಕ್ಷರ ರೂಪದ ಯಾವುದಾದರೂ ಪ್ರಕಾರದಲ್ಲಿ ಸೂಕ್ಷ್ಮ ಅಭಿವ್ಯಕ್ತಿಯಾದಾಗ ಅದು ಸಾಹಿತ್ಯವಾಗುತ್ತದೆ. ಔಪಚಾರಿಕವಾಗಿ ಸಾಹಿತ್ಯ ಓದದ ಚುಟುಕು ಗಂಗಣ್ಣ ಎಂದೇ ಹೆಸರಾದ ಗಂಗಾಧರಪ್ಪನವರ ಈ ಸಂಕಲನದಲ್ಲಿ ಆಶು ಕವಿತೆಯ ಚಹರೆಗಳಿವೆ. ಆಧುನಿಕ ಪರಿಭಾಷೆಯಲ್ಲಿ ಜಾನಪದ ಲಯ, ಲಕ್ಷಣದ ಅನುಭವ ನುಡಿಗಳಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಇತಿಹಾಸ ಸಂಶೋಧಕ ಮತ್ತು ಸಾಹಿತಿ ಬಿ.ರಾಜಶೇಖರಪ್ಪ ಮಾತನಾಡಿ,ಕನ್ನಡದಲ್ಲಿ ಮುಕ್ತಕಗಳಿಗೆ ಶತಮಾನದ ಇತಿಹಾಸವಿದೆ. ನೀತಿ, ವಿವೇಕ, ಪ್ರೀತಿ, ಸಾಂದರ್ಭಿಕವಾದ, ಅಭಿವ್ಯಕ್ತಿಯಾಗುವ ಕೆಲವೇ ಸಾಲುಗಳು ಸುಲಭವಾಗಿ ನೆನಪಿನಲ್ಲಿ ಉಳಿಯುವಂತಹುಗಳು. ಗಂಗಾಧರಪ್ಪನವರ ಈ ಸಂಕಲನದಲ್ಲಿ ನಮ್ಮ ನಿತ್ಯ ಬದುಕಿನ ಬಹುತೇಕ ವರ್ತನೆ, ಚಟುವಟಿಕೆಗಳು ಗದ್ಯ ಪ್ರಧಾನ ಪದ್ಯಗಳಂತಿವೆ ಎಂದರು. ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮತ್ತು ಮುರುಘಾ ಮಠದ ಶ್ರೀ ಮರುಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ.ಪ್ರಮೋದ್, ನಾಗರಾಜ ಸಂಗಂ ಮತ್ತು ಅಣ್ಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಭದಲ್ಲಿ ಉಮೇಶ್ ಪತ್ತಾರ್ ಅವರು ವಚನ ಪ್ರಾರ್ಥನೆ ಮಾಡಿದರೆ ಕೃತಿಕಾರಾದ ಗಂಗಾಧರಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಉಪನ್ಯಾಸಕ ಜ್ಞಾನಮೂರ್ತಿ ವಂದಿಸಿದರು. ಶಿಕ್ಷಕಿ ನೇತ್ರಾವತಿ ನಿರೂಪಣೆ ಮಾಡಿದರು.