ಚನ್ನಪಟ್ಟಣ: ವಿದ್ಯಾರ್ಥಿಗಳು ಸರ್ಕಾರಿ ಪ್ರಕಟಿತ ಪತ್ರಿಕೆ, ಪುಸ್ತಕಗಳನ್ನು ನಿರಂತರವಾಗಿ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದು ಸರ್ಕಾರಿ ಕೆಲಸ ಪಡೆಯಲು ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಎ.ಎಚ್.ಮಹೇಂದ್ರ ಸಲಹೆ ನೀಡಿದರು.
ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ದೇವಮ್ಮ-ಚಿಕ್ಕಣ್ಣ ಸಭಾಂಗಣದಲ್ಲಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್, ಬೆಂಗಳೂರಿನ ಉಜ್ವಲ ಅಕಾಡೆಮಿ ಹಾಗೂ ತುಮಕೂರಿನ ಸ್ಪರ್ಧಾ ಚೇತನ ಕೋಚಿಂಗ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕೆಎಎಸ್, ಪಿಎಸ್‌ಐ, ಪಿಡಿಒ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಸರ್ಕಾರಿ ಪ್ರಕಟಿತ ಪತ್ರಿಕೆ, ನಿಯತಕಾಲಿಕ, ಪಾಕ್ಷಿಕ, ಮಾಸಪತ್ರಿಕೆ ಹಾಗೂ ವಾರ್ಷಿಕ ವಿಶೇಷ ಪುಸ್ತಕಗಳಲ್ಲಿ ಅಧಿಕೃತವಾದ ಅಂಕಿ-ಅಂಶಗಳ ಜತೆಗೆ ಪ್ರತಿ ವಿಚಾರ ಸಹ ಸರಳತೆ ಹಾಗೂ ನಿಖರತೆಯನ್ನು ಹೊಂದಿರುತ್ತವೆ. ಇದರೊಂದಿಗೆ ನಿತ್ಯ ದಿನಪತ್ರಿಕೆ ಓದುವುದರಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿ ದಿಸೆಯಲ್ಲಿ ಸಾಮಾನ್ಯ ದರ್ಜೆಲ್ಲಿ ಉತ್ತೀರ್ಣರಾದ ತಾವು ಪದವಿ ಪೂರೈಸಿದ ಬಳಿಕ ಕಾಲಘಟ್ಟಕ್ಕೆ ತಕ್ಕಂತೆ ಯೋಜನೆ ಹಾಕಿಕೊಂಡು ಶ್ರದ್ಧೆ, ಸಮಯ ಪ್ರಜ್ಞೆ, ಪರಿಶ್ರಮ ವಹಿಸಿ ದಿನಕ್ಕೆ ಎಂಟು ತಾಸು ನಿರಂತರ ಅಧ್ಯಯನ ಮಾಡಿದ ಫಲವಾಗಿ ಇಂದು ತಹಸೀಲ್ದಾರ್ ಆಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಓದು ಅನಿವಾರ್ಯ. ವಿದ್ಯಾರ್ಥಿಗಳು ಕೆಸರಿನಲ್ಲಿ ಅರಳುವ ಕಮಲದಂತೆ, ವಿದ್ಯೆಯಲ್ಲಿ ಅರಳಿ ಸಾಧನೆ ಮಾಡಬೇಕು ಎಂದರು.
ಕುಂಬಳಗೂಡು ಬಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಮಾಕಳಿ ಎಂ.ಕೆ.ಶ್ರೀಕಾಂತ್ ಮಾತನಾಡಿ, ಪದವಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಹಲವಾರು ಸಲಹೆಗಳನ್ನು ನೀಡಿ ಸ್ಫೂರ್ತಿ ತುಂಬಿದರು.ಉಜ್ವಲ ಅಕಾಡೆಮಿ ನಿರ್ದೇಶಕ, ಖ್ಯಾತ ತರಬೇತುದಾರ ಕೆ.ಯು.ಮಂಜುನಾಥ್ ಹಾಗೂ ಸ್ಪರ್ಧಾ ಚೇತನ ಕೋಚಿಂಗ್ ಸೆಂಟರ್ ನಿರ್ದೇಶಕ ಜಿ.ಇ.ಆನಂದ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧತೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಅನೇಕ ದೃಷ್ಟಾಂತಗಳ ಮೂಲಕ ತಿಳಿಸಿಕೊಟ್ಟರು.
ಟ್ರಸ್ಟ್ ಅಧ್ಯಕ್ಷ ನಾಗವಾರ ಶಂಭೂಗೌಡ, ಸಿಂಟ್ರಸ್ಟ್ ಸಂಚಾಲಕ ಎನ್.ಎಸ್.ಆದರ್ಶ ಕುಮಾರ್, ನಾಗವಾರ ಎನ್.ಕೆ.ಯದುನಂದನ್, ಶಿಕ್ಷಣ ಪ್ರೇಮಿ ಜಾಲಮಂಗಲ ನಾಗರಾಜು, ಹೊಂಬೇಗೌಡ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಮಹೇಶ್ ಚಂದ್ರ, ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಸಿ.ಚನ್ನಪ್ಪ, ಖಜಾಂಚಿ ನಾರಾಯಣಗೌಡ, ಜ್ಞಾನ ಸರೋವರ ಕಾಲೇಜು ಪ್ರಾಂಶುಪಾಲೆ ಹೇಮಲತಾ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಪಾಂಶುಪಾಲರಾದ ರೂಪಲತಾ, ಸಿ.ಬಿ.ಕುಮಾರ್ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪೊಟೋ೨೪ಸಿಪಿಟಿ೩:ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಪುಸ್ತಕ ಕೊಡುಗೆಯಾಗಿ ನೀಡಲಾಯಿತು.