ಅರಸೀಕೆರೆ: ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಪ್ಪ ಅವರ ನಡೆ-ನುಡಿಗಳನ್ನು ವಿರೋಧಿಸಿ ಬೋವಿ ಸಮಾಜದ ನಾಯಕರು ಹಾಗೂ ಸದಸ್ಯರು ಕೆಂಡಾಮಂಡಲವಾಗಿದ್ದಾರೆ.ನಗರದ ಬೋವಿ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುರ್ಲೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಬೋವಿ ಸಮಾಜದ ಮುಖಂಡ ನಾಗರಾಜ್ ಮಾತನಾಡಿ, "ಅಜ್ಜಪ್ಪ ಅವರು ಅಂಗಡಿಯಲ್ಲಿ ವ್ಯವಹಾರ ನಡೆಸಿದ ಬಳಿಕ ಮಾಲೀಕರಿಗೆ ಕೊಡಬೇಕಾದ ಹಣವನ್ನು ತಿರಸ್ಕರಿಸಿ, ‘ನಾನು ಈಗಾಗಲೇ ಹಣ ಕೊಟ್ಟಿದ್ದೇನೆ, ಉಳಿದ ಬಾಕಿಯಲ್ಲಿ ಅರ್ಧವನ್ನು ಮಾತ್ರ ಕೊಡುತ್ತೇನೆ ಎಂದು ಹೇಳಿದ್ದಾರೆ ಆದರೆ ಅದನ್ನು ತಿರಸ್ಕರಿಸಿ ಅಂಗಡಿ ಮಾಲೀಕರು ಹಣಕ್ಕಾಗಿ ಒತ್ತಾಯಿಸಿದಾಗ, ಅಜ್ಜಪ್ಪ ಅವರು ನಿಮ್ಮ ಮೇಲೆ ವಡ್ಡನನ್ನು ಕರೆಸಿ ಅಟ್ರಾಸಿಟಿ ಕೇಸ್ ಹಾಕಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಇಂತಹ ನಡವಳಿಕೆಯಿಂದ ಸಮಾಜದ ಹೆಸರಿಗೆ ಧಕ್ಕೆಯಾಗಿದ್ದು, ಈ ರೀತಿಯ ವ್ಯಕ್ತಿಯಿಂದ ನಮ್ಮ ಬೋವಿ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ರೀತಿಯ ಮನೋಭಾವನೆ ಹೊಂದಿರುವವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಹೇಗೆ ಅಲಂಕರಿಸಬಹುದು? ಅವರು ಮಾಡಿರುವ ತಪ್ಪಿನ ಹೊಣೆ ಹೊತ್ತು ತಕ್ಷಣವೇ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಈ ಹಿನ್ನೆಲೆಯಲ್ಲಿ, ಸಮಾಜದ ಮುಖಂಡರು ಅಜ್ಜಪ್ಪನವರ ವಿರುದ್ಧ ಈಗಾಗಲೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಡ್ಡಪದ ಬಳಸಿದ ಪ್ರಕರಣಕ್ಕೂ ಅಟ್ರಾಸಿಟಿ ಕೇಸ್ ದಾಖಲಿಸಲು ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಪುಣ್ಯಕೋಟಿ, ಗ್ರಾಮ ಪಂಚಾಯಿತಿ ಸದಸ್ಯ ಗುರುಮೂರ್ತಿ, ಕೌನ್ಸಿಲರ್ ಯುವರಾಜ್ ಸೇರಿದಂತೆ ನೂರಾರು ಸಮಾಜದ ಮುಖಂಡರು ಭಾಗವಹಿಸಿ ಅಜ್ಜಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.