ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪುನರ್ ನಿರ್ಮಾಣಗೊಂಡ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮನಾಥೇಶ್ವರ ದೇವರು ಹಾಗೂ ಮಹಿಷಮರ್ಧಿನಿ ಅಮ್ಮನವರಿಗೆ ಗುರುವಾರ ಪೂರ್ವಾಹ್ನ ೭.೩೭ರ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕವು ಮಂಗಳ ವಾದ್ಯ ಮೇಳ ಘೋಷ ಸಹಿತ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಸಂಪನ್ನಗೊಂಡಿತು. ಈ ಅಪೂರ್ವ ಕ್ಷಣಗಳ ನಿರೀಕ್ಷೆಯಲ್ಲಿದೇವಳದ ಒಳ ಹೊರ ಪ್ರಾಂಗಣದಲ್ಲಿ ಸೇರಿದ್ದದ್ದ ಸಹಸ್ರಾರು ಭಜಕರು ನೇರ, ಬೃಹತ್ ಪರದೆಗಳಲ್ಲಿ ನೇರ ಪ್ರಸಾರದ ಮೂಲಕ ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡರು.ದಿನವಿಡೀ ಶ್ರೀ ಸೋಮನಾಥೇಶ್ವರನ ಸನ್ನಿಧಿಗೆ ಹರಿದು ಬಂದ ಭಕ್ತ ಜನಸಾಗರ ಕ್ಷೇತ್ರದ ಆರಾಧ್ಯ ಮೂರ್ತಿಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಮಹಾ ರಂಗಪೂಜೆ, ಮಹೋತ್ಸವ ನಡೆಯಿತು.ಕಳೆದ ಮಾ.೨ ರಂದು ಶ್ರೀ ದೇವರ ಪುನರ್‌ಪ್ರತಿಷ್ಠೆ ನಡೆದಿತ್ತು ಗುರುವಾರ ಪ್ರಾತಃ ಕಾಲ 4ರಿಂದ ಸ್ವಸ್ತಿವಾಚನ, ಪಂಚಾಮೃತ ಅಭಿಷೇಕ ಪರಿಕಲಶ ಅಭಿಷೇಕ ಸಹಿತ ಧಾರ್ಮಿಕ ಕಾರ್ಯಕ್ರಮಗಳು ತಂತ್ರಿ ವರೇಣ್ಯರು, ವೈದಿಕ ವೃಂದದಿಂದ ಆರಂಭಗೊಂಡಿದ್ದವು.ಶ್ರೀ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕುಲದೀಪ ಎಂ, ಗೌರವಾಧ್ಯಕ್ಷ ವೀರೇಂದ್ರ ಎಂ, ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಗೌರವಾಧ್ಯಕ್ಷ ವೀರೇಂದ್ರ ಎಂ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಕ್ಷೇತ್ರದ ಪ್ರಧಾನ ಅರ್ಚಕ ವೇ ಮೂ.ಅಡಿಗಳ್ ಪಿ ಅನಂತಕೃಷ್ಣ ಭಟ್, ಸಮಿತಿಯ ಕಾರ್ಯಧ್ಯಕ್ಷ ನೀಲೇಶ್ ಶೆಟ್ಟಿ, ಉಪಾಧ್ಯಕ್ಷರಾದ ಶಿವಪ್ರಸಾದ್ ಆಚಾರ್ ಕುಂಗೂರು, ಶ್ರೀಕಾಂತ್ ರಾವ್, ವಿದ್ಯಾರಮೇಶ ಭಟ್, ವಾದಿರಾಜ ಮಡ್ಮಣ್ಣಾಯ ಮತ್ತಿತರರು ಇದ್ದರು.ಸಂಜೆ ಪೇಜಾವರ , ಫಲಿಮಾರು ಮಠದ ಶ್ರೀಗಳವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರಗಿತು.ರಾತ್ರಿ ಯಕ್ಷ ಧ್ರುವ ಪಟ್ಲ ಫೌಂಡೇಶನ್‌ನ ಪಟ್ಲ ಸತೀಶ್ ಶೆಟ್ಟಿ ತಂಡದಿಂದದ ಯಕ್ಷ-ಗಾನ ವೈಭವ, ನೃತ್ಯೋಲ್ಲಾಸ ಆಳ್ವಾಸ್ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಭಜನಾ ಕಾರ್ಯಕ್ರಮಗಳು ಜರಗಿದವು.ಶುಕ್ರವಾರ ಸಂಪ್ರೋಕ್ಷಣೆ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.ಸಂಜೆ ಧರ್ಮ ದೈವಗಳ ನೇಮೋತ್ಸವ ನಡೆಯಲಿದೆ. ಇದರೊಂದಿಗೆ ಫೆ 28ರಿಂದ ಆರಂಭಗೊಂಡ ದೇವಳದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಶುಕ್ರವಾರ ಸಮಾಪನಗೊಳ್ಳಲಿದೆ.