ವಿಜೃಂಭಣೆಯಿಂದ ನಡೆದ ಶ್ರೀ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ

KannadaprabhaNewsNetwork | Published : Apr 30, 2024 2:12 AM
Follow Us

ಸಾರಾಂಶ

ಶ್ರೀಕ್ರೋಧಿ ನಾಮ ಸಂವತ್ಸರದ 12ರಿಂದ 1 ಗಂಟೆ ಒಳಗೆ ಸಲ್ಲುವ ಅಭಿಜಿನ್ ಲಗ್ನದ ಶುಭ ಮಹೂರ್ತದಲ್ಲಿ ಶ್ರೀನರಸಿಂಹಸ್ವಾಮಿ, ಸೌಮ್ಯ ನಾಯಕಿ, ರಂಗನಾಯಕಿ ಪುಷ್ಪಾಲಕೃತ ಉತ್ಸವ ಮೂರ್ತಿಗಳನ್ನು ಸಾಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಮಹಾ ಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಸ್ಥಳೀಯರು ಒಳಗೊಂಡಂತೆ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಧನ್ಯತಾಭಾವ ಮೆರೆದರು.

ಶ್ರೀಕ್ರೋಧಿ ನಾಮ ಸಂವತ್ಸರದ 12ರಿಂದ 1 ಗಂಟೆ ಒಳಗೆ ಸಲ್ಲುವ ಅಭಿಜಿನ್ ಲಗ್ನದ ಶುಭ ಮಹೂರ್ತದಲ್ಲಿ ಶ್ರೀನರಸಿಂಹಸ್ವಾಮಿ, ಸೌಮ್ಯ ನಾಯಕಿ, ರಂಗನಾಯಕಿ ಪುಷ್ಪಾಲಕೃತ ಉತ್ಸವ ಮೂರ್ತಿಗಳನ್ನು ಸಾಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಮಹಾ ಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಧಾರ್ಮಿಕ ದತ್ತಿ ಇಲಾಖೆ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್, ದೇಗುಲದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಪಾರು ಪತ್ತೇದಾರ್ ಕೆಆರ್ ಮಂಜುನಾಥ್ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ನಂತರ ದೇಗುಲ ಆವರಣದಲ್ಲಿ ನೆರೆದಿದ್ದ ಭಕ್ತಾದಿಗಳು ಹಣ್ಣು ದವನ ಎಸೆದು ಗೋವಿಂದ ಗೋವಿಂದ ಎಂಬ ನಾಮಸ್ಪರಣೆಯೊಂದಿಗೆ ರಥವನ್ನು ಎಳೆದು ಭಕ್ತಿಭಾವ ಮೆರೆದರು. ಬಳಿಕ ದೇಗುಲದ ಆವರಣದಿಂದ ಕೋಟೆ ಬೀದಿ ಮಾರ್ಗವಾಗಿ ಕಾಗಿ ಬಂದ ರಥಕ್ಕೆ ಭಕ್ತಾದಿಗಳು ಫಲಾಮೃತ ನೈವೇದ್ಯದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಥೋತ್ಸವದ ಅಂಗವಾಗಿ ಶ್ರೀನರಸಿಂಹ ಸ್ವಾಮಿ ಸೇವಾ ಸಂಘ, ಬ್ರಾಹ್ಮಣ ಸಂಘ, ಶಿವಕೃಪ ಡಿಸ್ಟ್ರಿಬ್ಯೂಟರ್, ರತ್ನ ಎಂಟರ್ ಪ್ರೈಸಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಲ್ಲಲ್ಲಿ ಅರವಟ್ಟಿಗೆಗಳನ್ನು ಸ್ಥಾಪಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾಧಿಗಳಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆಯೊಂದಿಗೆ ಅನ್ನ ಸಂತರ್ಪಣೆ ನಡೆಯಿತು.

ರಥೋತ್ಸವದ ಅಂಗವಾಗಿ ಸಿಪಿಐ ಕೆ.ಆರ್. ಪ್ರಸಾದ್, ಸಂಚಾರಿ ಠಾಣೆ ಪಿಎಸ್ಐ ಎಂ.ಜೆ.ಮಹೇಶ್, ಪಿಎಸ್ಐ ಮಂಜುನಾಥ್. ಅಪರಾಧ ವಿಭಾಗದ ಪಿಎಸ್ಐ ಜಮೀರ್ ಅಹ್ಮದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಮಾಡಲಾಗಿತ್ತು.