ಏ.13ಕ್ಕೆ ಬ್ರಾಹ್ಮಣ ಮಹಾಸಭಾದ ಚುನಾವಣೆ

KannadaprabhaNewsNetwork | Published : Mar 26, 2025 1:37 AM

ಸಾರಾಂಶ

ಶಿವಮೊಗ್ಗ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಚುನಾವಣೆಯು ಏ.13 ರಂದು ನಗರದ ವಾಸವಿ ವಿದ್ಯಾಲಯದಲ್ಲಿ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ ಎಸ್.ದತ್ತಾತ್ರಿ ತಿಳಿಸಿದರು.

ಶಿವಮೊಗ್ಗ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಚುನಾವಣೆಯು ಏ.13 ರಂದು ನಗರದ ವಾಸವಿ ವಿದ್ಯಾಲಯದಲ್ಲಿ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ ಎಸ್.ದತ್ತಾತ್ರಿ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏ.13 ರಂದು ಚುನಾವಣೆ ನಡೆಯಲಿದ್ದು, ಮಾ.27 ರಂದು ಬೆಂಗಳೂರಿನಲ್ಲಿ ನಾಮಿನೇಷನ್ ಮಾಡಲಿದ್ದಾರೆ. ಎಲ್ಲಾ ತಾಲೂಕುಗಳಲ್ಲಿ ತಂಡ ರಚನೆ ಮಾಡಿದ್ದೇವೆ. ಜಿಲ್ಲೆಯಲ್ಲಿ 3414 ಮತಗಳಿದ್ದು, ಶಿವಮೊಗ್ಗ ನಗರದಲ್ಲಿ 1687 ವೋಟ್‌ಗಳಿವೆ. ಸಾಗರದಲ್ಲಿ 900 ವೋಟ್‌ಗಳಿವೆ ಎಂದು ಮಾಹಿತಿ ನೀಡಿದರು.ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶ ಮತ್ತು ಬಡ ಬ್ರಾಹ್ಮಣ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಇದು ಬ್ರಾಹ್ಮಣರ ನಡುವೆ ಐಕ್ಯತೆ ಮೂಡಿಸುವಲ್ಲಿ ಸಫಲವಾಗಿದೆ. ನಾಡಿನ ಪ್ರಖ್ಯಾತರು ಸಾರಥ್ಯವನ್ನು ವಹಿಸಿ, ಮಹಾಸಭಾದ ಏಳಿಗೆಗಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಘುನಾಥ್ ಅವರು, ಪ್ರತಿಷ್ಠಿತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಎಸ್.ರಘುನಾಥ್‌ ಅವರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕೆಲಸ ಮಾಡಿ ಹೆಸರು ಮಾಡಿದವರು. ಇವರು ರಾಜಕೀಯ ಕ್ಷೇತ್ರದಲ್ಲಿ ಬೆಂಗಳೂರು ನಗರ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಚುನಾವಣೆ ವೇಳೆ ಸಂಚಾಲಕರಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಿದವರು ಎಂದರು.ಇವರು ವೃತ್ತಿಯಲ್ಲಿ ಸೆಂಚುರಿ ಬಿಲ್ಡರ್ಸ್ ಗ್ರೂಪಿನಲ್ಲಿ 34 ವರ್ಷಗಳ ಕಾಲ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಯಶಸ್ವಿ ವೃತ್ತಿ ಸಾಧಕರಾಗಿದ್ದಾರೆ. ಈ ಹಿಂದೆ ನಡೆದ ಮಹಾಸಭೆಯ ಚುನಾವಣೆಯಲ್ಲಿ ಆಲ್ಪಮತದಿಂದ ಪರಾಭವಗೊಂಡರೂ ಸಮಾಜದ ನಡುವೆ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರತಿನಿಧಿಸಲು ಸ್ಪರ್ಧಿಸಿದ್ದು, ತಮ್ಮೆಲ್ಲರ ಸಹಕಾರ, ಆಶೀರ್ವಾದವನ್ನು ಬಯಸಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಹಾಗೂ ವಿಪ್ರ ಮುಖಂಡ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ರಘುರಾಮ್, ರಾಜ್ಯಕ್ಕೆ ರಘುನಾಥ್ ಎನ್ನುವ ಘೋಷಣೆಯೊಂದಿಗೆ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ರಘುರಾಮ್ ಅವರ ಗೆಲುವು ನಿಶ್ಚಿತ ಎನ್ನಿಸುತ್ತದೆ ಎಂದರು.

ಜಿಲ್ಲೆಯಲ್ಲಿ ಸಮಾಜಕ್ಕೆ ಬೇಕಾಗಿರುವ ಶಾಲಾ ಕಾಲೇಜು ಪ್ರಾರಂಭಿಸುವುದು, ಆಸ್ಪತ್ರೆಗಳ ಸೌಲಭ್ಯವನ್ನು ಸಮಾಜದವರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು. ಈ ಬಾರಿ ಗೆದ್ದಂತಹವರಿಗೆ 5 ವರ್ಷ ಅವಧಿ ಇರುತ್ತದೆ ಎಂದು ಮಾಹಿತಿ ನೀಡಿದರು.ಅಭ್ಯರ್ಥಿ ರಘುರಾಮ್ ಮಾತನಾಡಿ, ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಹಿರಿಯರ ಮಾರ್ಗದರ್ಶನದ ನಿಟ್ಟಿನಲ್ಲಿ ಸ್ಫರ್ಧೆ ಮಾಡುತ್ತಿದ್ದೇನೆ. 1986ರಲ್ಲಿ ಕೆಇಬಿಯಲ್ಲಿ ವೃತ್ತಿ ಜೀವನ ಆರಂಭಿಸಿ, ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ, 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಪ್ರತಿಷ್ಠಿತ ತಾಲೂಕು ಬ್ರಾಹ್ಮಣ ಸೇವಾ ಸಂಘ, ಸರ್ ಎಂ.ವಿ. ಸೊಸೈಟಿ, ಹೊಯ್ಸಳ ಸೌಹಾರ್ದ ಸಹಕಾರಿಗಳಲ್ಲಿ ನಿರ್ದೇಶಕರು, ಖಜಾಂಚಿ ಹಾಗೂ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಪ್ರಸಕ್ತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಪ್ರತಿನಿಧಿಸಲು ಸ್ಪರ್ಧಿಸಿದ್ದು, ತಮ್ಮೆಲ್ಲರ ಸಹಕಾರ, ಆಶೀರ್ವಾದ ಇರಲಿ ಎಂದು ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ಎಂ.ಶಂಕರ್ ರಾವ್, ಕೇಶವ ಮೂರ್ತಿ, ಮಾಧವಾಚಾರ್, ಉಮಾಶಂಕರ್ ಉಪಾಧ್ಯ, ಕೃಷ್ಣಮೂರ್ತಿ, ಎಚ್.ಸಿ.ಸುರೇಶ್, ಆರ್.ಅಚ್ಯುತ್ ರಾವ್, ರವಿಶಂಕರ್, ಗುರುರಾಜ, ಸುಹಾಸ್ ಶಾಸ್ತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article