ಅಗಲೀಕರಣಕ್ಕಾಗಿ ಕಾಯುತ್ತಿದೆ ಬ್ರಾಹ್ಮಣ ಬೀದಿ!

KannadaprabhaNewsNetwork |  
Published : Jun 03, 2026, 02:00 AM IST
ಬ್ರಾಹ್ಮಣ ಬೀದಿಯಲ್ಲಿ ವಾಹನ ದಟ್ಟನೆ | Kannada Prabha

ಸಾರಾಂಶ

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಬ್ರಾಹ್ಮಣ ಬೀದಿ ದಿನದ ಬಹುತೇಕ ಸಮಯ ವಾಹನ ದಟ್ಟಣೆ, ಜನಸಂದಣಿ ಹಾಗೂ ಅವ್ಯವಸ್ಥೆಯಿಂದ ಕಿಕ್ಕಿರಿದಿರುತ್ತದೆ. ಈ ರಸ್ತೆ ಅಗಲೀಕರಣದ ಮಾತು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ, ಈ ವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಹಾಗೂ ನಿತ್ಯ ಸಾವಿರಾರು ಜನರು ಓಡಾಡುವ ಬ್ರಾಹ್ಮಣ ಬೀದಿ ಇದೀಗ ಸಾರ್ವಜನಿಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಈ ರಸ್ತೆ ದಿನದ ಬಹುತೇಕ ಸಮಯ ವಾಹನ ದಟ್ಟಣೆ, ಜನಸಂದಣಿ ಹಾಗೂ ಅವ್ಯವಸ್ಥೆಯಿಂದ ಕಿಕ್ಕಿರಿದಿರುತ್ತದೆ. ಈ ರಸ್ತೆ ಅಗಲೀಕರಣದ ಮಾತು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ, ಈ ವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬ್ರಾಹ್ಮಣ ಬೀದಿ ಎರಡೂ ಬದಿಗಳಲ್ಲಿ ಸಾವಿರಕ್ಕೂ ಅಧಿಕ ವ್ಯಾಪಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ ಸಾವಿರಾರು ಗ್ರಾಹಕರು, ವ್ಯಾಪಾರಿಗಳು ಹಾಗೂ ವಾಹನ ಸವಾರರು ಈ ರಸ್ತೆ ಅವಲಂಬಿಸಿದ್ದಾರೆ. ಆದರೆ, ರಸ್ತೆ ಅಗಲ ಕಡಿಮೆ ಇರುವುದರಿಂದ ಎರಡು ವಾಹನಗಳು ಎದುರುಬದುರಾದರೆ ಸಂಚಾರವೇ ಸ್ಥಗಿತಗೊಳ್ಳುವ ಪರಿಸ್ಥಿತಿ. ಅದರಲ್ಲೂ ಪೀಕ್ ಅವಧಿಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ದೊಡ್ಡ ಸಾಹಸ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಸರ್ಕಸ್ ಮಾಡದೆ ವಿಧಿಯಿಲ್ಲ.

ಈ ರಸ್ತೆ ಹಲವೆಡೆಗಳಲ್ಲಿ ಗುಂಡಿಗಳಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಲಿಸದಿದ್ದರೆ ಅಪಘಾತ ಗ್ಯಾರಂಟಿ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಅನೇಕ ಬಾರಿ ವಾಹನ ಸವಾರರು ಜಾರಿ ಬಿದ್ದು, ಗಾಯಗೊಂಡಿರುವ ಘಟನೆಗಳೂ ನಡೆದಿವೆ.

ಇನ್ನೊಂದೆಡೆ ಪಾದಚಾರಿಗಳ ಸ್ಥಿತಿಯೂ ದುಸ್ತರವಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳು, ವಾಹನಗಳ ನಿಲುಗಡೆ ಹಾಗೂ ಅತಿಕ್ರಮಣ ಕಾರಣದಿಂದ ಜನರು ಸುರಕ್ಷಿತವಾಗಿ ನಡೆದಾಡಲು ಅವಕಾಶವೇ ಇಲ್ಲದಂತಾಗಿದೆ. ವೃದ್ಧರು, ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಅಪಾಯದ ನಡುವೆಯೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಬ್ರಾಹ್ಮಣ ಬೀದಿ ಅಗಲೀಕರಣದ ಕುರಿತು ಹಲವು ಬಾರಿ ಚರ್ಚೆಗಳು ನಡೆದಿವೆ. ವಿವಿಧ ಸಂಘಟನೆಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿದ್ದಾರೆ. ಆದರೆ, ಅತಿಕ್ರಮಣ ತೆರವು, ಕಟ್ಟಡ ಸ್ವಾಧೀನ ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಪರಿಣಾಮವಾಗಿ ಸಮಸ್ಯೆ ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದೆ. ನಗರದ ಆರ್ಥಿಕ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ರಸ್ತೆಯ ಅಭಿವೃದ್ಧಿ ಈಗ ಅನಿವಾರ್ಯವಾಗಿದೆ. ರಸ್ತೆ ಅಗಲೀಕರಣದೊಂದಿಗೆ ಗುಣಮಟ್ಟದ ರಸ್ತೆ ನಿರ್ಮಾಣ, ಸಮರ್ಪಕ ಚರಂಡಿ ವ್ಯವಸ್ಥೆ, ಪಾದಚಾರಿ ಮಾರ್ಗ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಇದರಿಂದ ವ್ಯಾಪಾರ ಚಟುವಟಿಕೆಗೂ ಉತ್ತೇಜನ ದೊರೆಯುವುದರ ಜೊತೆಗೆ ಸಾರ್ವಜನಿಕರ ಸಂಚಾರವೂ ಸುಗಮವಾಗಲಿದೆ. ಜನಪ್ರತಿನಿಧಿಗಳು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ. ಹಲವು ವರ್ಷಗಳಿಂದ ಕೇವಲ ಚರ್ಚೆಯ ಮಟ್ಟದಲ್ಲೇ ಉಳಿದಿರುವ ಬ್ರಾಹ್ಮಣ ಬೀದಿ ಅಗಲೀಕರಣಕ್ಕೆ ಈಗಾದರೂ ಚಾಲನೆ ಸಿಗಬೇಕಿದೆ. ಬ್ರಾಹ್ಮಣ ಬೀದಿ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ತೊಂದರೆ ತಂದೊಡ್ಡಿರುವ ಇಕ್ಕಟ್ಟಾದ ರಸ್ತೆಗಳ ಅಗಲೀಕರಣಕ್ಕೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕಿದೆ.

ಬ್ರಾಹ್ಮಣ ಬೀದಿಯನ್ನು ಅಗಲೀಕರಣ ಮಾಡುವ ಮೂಲಕ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ಪಾದಚಾರಿಗಳಿಗೆ ಓಡಾಡಲು ಜಾಗವಿಲ್ಲದೆ ನಡು ರಸ್ತೆಯಲ್ಲಿಯೇ ಓಡಾಡುವಂತಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿವೆ ಎನ್ನುತ್ತಾರೆ ಖಾಸಗಿ ಉದ್ಯೋಗಿಗಳಾದ ಮನುಕುಮಾರ್, ವೀರೇಶ್.ಬಳ್ಳಾರಿ ಜನರ ಆಶಯದಂತೆ ಬ್ರಾಹ್ಮಣ ಬೀದಿಯ ಅಗಲೀಕರಣ ಕಾರ್ಯವನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳುತ್ತೇವೆ. ತೀರಾ ಇಕ್ಕಟ್ಟು ಜಾಗದಲ್ಲಿ ಜನರು ಓಡಾಡುವುದು ಕಷ್ಟವಾಗಿದ್ದು, ಕೂಡಲೇ ಅಗಲೀಕರಣದ ಕ್ರಮ ವಹಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಲವಾದರೂ ಹಾವೇರಿ ಜಿಲ್ಲೆಗೆ ಸಿಗುತ್ತಾ ಮಂತ್ರಿ ಸ್ಥಾನ?
ಬಳ್ಳಾರಿಯಲ್ಲಿ ಗುಡುಗು-ಸಿಡಿಲು ಸಮೇತ ಮಳೆನೂರಕ್ಕೂ ಅಧಿಕ ಮರಗಳು ಧರೆಗೆ