ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಡಿ.ಕೆ.ಶಿವಕುಮಾರ ಪದಗ್ರಹಣ ಮಾಡುತ್ತಿದ್ದು, ಅವರ ಸಂಪುಟ ಸೇರಲು ಜಿಲ್ಲೆಯ ಶಾಸಕರು ಕೊನೆ ಕ್ಷಣದ ಪ್ರಯತ್ನದಲ್ಲಿದ್ದಾರೆ. ಈ ಸಲವಾದರೂ ಜಿಲ್ಲೆಗೆ ಮಂತ್ರಿಗಿರಿ ಸಿಗುತ್ತಾ ಎಂಬ ಕುತೂಹಲ ಮೂಡಿಸಿದೆ.
ಮಂತ್ರಿ ಸ್ಥಾನಕ್ಕಾಗಿ ಜಿಲ್ಲೆಯ ಶಾಸಕರು ಈಗಾಗಲೇ ಲಾಬಿ ನಡೆಸಿದ್ದಾರೆ. ಆ ಪೈಕಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾವೇರಿಯ ರುದ್ರಪ್ಪ ಲಮಾಣಿ, ಹಾನಗಲ್ಲಿನ ಶ್ರೀನಿವಾಸ ಮಾನೆ ಪೈಪೋಟಿ ನಡೆಸಿದ್ದಾರೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಶಿಗ್ಗಾಂವಿಯ ಯಾಸಿರ್‌ಖಾನ್ ಪಠಾಣ್ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆದ್ದವರು. ಪ್ರಕಾಶ ಕೋಳಿವಾಡ ಕೂಡ ಮೊದಲ ಬಾರಿಗೆ ಶಾಸಕರಾದವರು. ಹಿರೇಕೆರೂರಿನ ಯು.ಬಿ. ಬಣಕಾರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂದು ಗೆದ್ದವರು. ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ ಈ ಮೂವರು ಪರಿಗಣನೆಗೆ ಬರಲಿದ್ದಾರೆ. ಆ ಸಾಧ್ಯತೆ ಕಡಿಮೆ ಇರುವುದರಿಂದ ಮಂತ್ರಿ ಸ್ಥಾನಕ್ಕೆ ಈ ಮೂವರು ಅಷ್ಟೇನೂ ಪ್ರಯತ್ನ ನಡೆಸಿಲ್ಲ. ಆದರೆ, ಮೂವರು ಹಿರಿಯ ಶಾಸಕರು ದೆಹಲಿ, ಬೆಂಗಳೂರು ಅಲೆಯುತ್ತಲೇ ಇದ್ದು, ಹೇಗಾದರೂ ಸಂಪುಟ ಸೇರಬೇಕು ಎಂಬ ಪ್ರಯತ್ನದಲ್ಲಿದ್ದಾರೆ.ಎಲ್ಲ ಕ್ಷೇತ್ರಗಳಲ್ಲಿ ಕೈ ಶಾಸಕರು: ಶಿಗ್ಗಾಂವಿ ಉಪಚುನಾವಣೆ ಗೆಲುವು ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಪಕ್ಷಕ್ಕೆ ಶಕ್ತಿ ತುಂಬಿರುವ ಜಿಲ್ಲೆಗೆ ಸಹಜವಾಗಿಯೇ ರಾಜಕೀಯ ಪ್ರಾತಿನಿಧ್ಯ ಅಗತ್ಯವಿದ್ದು, ಇದನ್ನೇ ಜಿಲ್ಲೆಯ ಶಾಸಕರು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದೇ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯವರೇ ಉಸ್ತುವಾರಿ ಮಂತ್ರಿಗಳಾದರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದ್ದು, ಜಿಲ್ಲೆಯ ಯಾರಿಗಾದರೂ ಮಂತ್ರಿ ಸ್ಥಾನ ಕೊಡಬೇಕು ಎಂಬುದು ಕೈ ಕಾರ್ಯಕರ್ತರ ಆಗ್ರಹವಾಗಿದೆ.
ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ: ಪಕ್ಷನಿಷ್ಠೆ, ಹಿರಿತನ, ಜಾತಿ, ಯುವ ನಾಯಕ ಇತ್ಯಾದಿ ಅಸ್ತ್ರ ಹಿಡಿದು ಜಿಲ್ಲೆಯ ಶಾಸಕರು ಪಕ್ಷದ ನಾಯಕರ ಬೆನ್ನು ಬಿದ್ದಿದ್ದಾರೆ. ಡಿಕೆಶಿ ಸಂಪುಟದಲ್ಲಿ ಸೇರಲು ಹಿರಿಯ ಶಾಸಕರು ಕಸರತ್ತು ನಡೆಸಿದ್ದಾರೆ. ವಿಧಾನಸಭೆ ಉಪಾಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ ಅವರು ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಅಲ್ಲದೇ ಬಂಜಾರ ಸಮುದಾಯದ ಏಕೈಕ ಶಾಸಕ ಆಗಿರುವುದರಿಂದ ಮಂತ್ರಿ ಸ್ಥಾನದ ರೇಸ್‌ನಲ್ಲಿ ಮುಂದಿದ್ದಾರೆ. ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು, ಮುಂದೆ ಅವಕಾಶ ನೀಡುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿದ್ದರು. ಆದ್ದರಿಂದ ಈ ಸಲ ಅವಕಾಶ ಸಿಗುತ್ತದೆ ಎಂಬ ಭರವಸೆಯಿದೆ ಎಂದು ರುದ್ರಪ್ಪ ಲಮಾಣಿ ಹೇಳಿದ್ದಾರೆ. ಇನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಕೂಡ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿದ್ದಾರೆ. ಜನತಾದಳ ಸರ್ಕಾರವಿದ್ದಾಗಲೇ ಮಂತ್ರಿಯಾಗಿದ್ದ ಅವರಿಗೆ ನಂತರ ಅವಕಾಶ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಕುರುಬ ಸಮುದಾಯಕ್ಕೆ ಸೇರಿದ ಬಸವರಾಜ ಶಿವಣ್ಣನವರಗೆ ಅವಕಾಶ ಕಡಿಮೆಯಾಗಿತ್ತು. ಈಗ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿದಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲು ಶಿವಣ್ಣನವರಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಹೆಚ್ಚಿದೆ.
ಇನ್ನು ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಕೂಡ ಸಚಿವ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಸದ್ದಿಲ್ಲದೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಅವರು, ಮಂತ್ರಿಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಅವರು, ಇತ್ತೀಚೆಗೆ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರೂ ಮಂತ್ರಿಗಿರಿ ಮೇಲೆ ಕಣ್ಣಿಟ್ಟು ಪೈಪೋಟಿ ನಡೆಸುತ್ತಿದ್ದಾರೆ. ಎರಡು ಅವಧಿ ಪರಿಷತ್ ಸದಸ್ಯರಾಗಿ, ಎರಡು ಸಲ ಶಾಸಕರಾಗಿ ಹೀಗೆ ನಾಲ್ಕು ಬಾರಿ ಶಾಸಕರಾಗಿರುವ ಅವರ ಹೆಸರು ಕೆಲವು ದಿನಗಳಿಂದ ಜೋರಾಗಿ ಓಡುತ್ತಿದೆ. ಆದರೆ ಪಕ್ಷದ ಹೈಕಮಾಂಡ್ ಸಾಮಾಜಿಕ ನ್ಯಾಯದಡಿ ಎಲ್ಲ ಜಾತಿ, ವರ್ಗದವರನ್ನು ಪರಿಗಣಿಸಿದರೆ ಅವಕಾಶ ಕೈತಪ್ಪಬಹುದು ಎನ್ನಲಾಗುತ್ತಿದೆ.
ಜಿಲ್ಲೆಯವರು ಮಂತ್ರಿಯಾಗಲಿ: ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಒಬ್ಬರನ್ನೂ ಮಂತ್ರಿ ಮಾಡಿರಲಿಲ್ಲ. ಅದಕ್ಕಾಗಿ ಈ ಸಲ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಬೇಕು ಎಂಬುದು ಎಲ್ಲ ಶಾಸಕರ ಹಕ್ಕೊತ್ತಾಯವಾಗಿದೆ. ಪಕ್ಷದ ಹೈಕಮಾಂಡ್ ನಮ್ಮ ಬೇಡಿಕೆಗೆ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.