ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಗಳವಾರ ಸಂಜೆ ಸುರಿದ ಮಳೆ ಹಾಗೂ ಬಿರುಗಾಳಿಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಜೋರಾಗಿ ಬೀಸಿದ ಗಾಳಿಗೆ ನಗರದ ವಿವಿಧ ಪ್ರದೇಶಗಳಲ್ಲಿ ನೂರಕ್ಕೂ ಅಧಿಕ ಮರಗಳು ನೆಲಕ್ಕುರುಳಿದ್ದು, ಕೆಲವೆಡೆ ವಿದ್ಯುತ್ ಕಂಬಗಳು ಸಹ ಧರೆಗುರುಳಿದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.
ಸಂಜೆ ಸುಮಾರು 5 ಗಂಟೆ ವೇಳೆಗೆ ಗುಡುಗು-ಸಿಡಿಲಿನೊಂದಿಗೆ ತುಂತುರು ಮಳೆ ಆರಂಭಗೊಂಡಿತು. ಆರಂಭದಲ್ಲಿ ಸಾಧಾರಣವಾಗಿದ್ದ ಮಳೆ ನಂತರ ಬಿರುಗಾಳಿಯೊಂದಿಗೆ ಮುಂದುವರಿದ ಪರಿಣಾಮ ಅನೇಕ ಬೃಹತ್ ಮರಗಳು ಉರುಳಿ ಬಿದ್ದವು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾದರೆ, ಸಂಜೆ 6 ಗಂಟೆಯವರೆಗೂ ಜಿನುಗು ಮಳೆ ಮುಂದುವರಿಯಿತು.ನಗರದ ಪಾರ್ವತಿ ನಗರದ ನಾಲ್ಕನೇ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಯಿತು. ಅದೃಷ್ಟವಶಾತ್ ಘಟನೆಯ ವೇಳೆ ವಾಹನದಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಆದರೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಸ್ಥಳೀಯರು ಕೆಲಕಾಲ ಪರದಾಡಬೇಕಾಯಿತು. ಮಾಹಿತಿ ತಿಳಿದ ಕೂಡಲೇ ವಾರ್ಡ್ ಸದಸ್ಯ ಹನುಮಂತ ಗುಡಗಂಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮರವನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರಕಾರ, ಸಣ್ಣಪುಟ್ಟ ಮರಗಳು ಸೇರಿದಂತೆ ನಗರ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿರುವ ಸಾಧ್ಯತೆ ಇದೆ. ವಿವಿಧ ಪ್ರದೇಶಗಳಿಂದ ಮರಗಳು ಬಿದ್ದಿರುವ ಬಗ್ಗೆ ದೂರುಗಳು ಬಂದಿದ್ದು, ತೆರವು ಕಾರ್ಯ ನಡೆದಿತ್ತು. ಜಿಲ್ಲೆಯ ವಿವಿಧ ಭಾಗಗಳಲ್ಲಿಯೂ ಉತ್ತಮ ಮಳೆಯಾಗಿದೆ. ಕೊಟ್ಟೂರು ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು, ಸಂಡೂರು, ಸಿರುಗುಪ್ಪ ಹಾಗೂ ಕಂಪ್ಲಿ ತಾಲೂಕುಗಳ ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ವರುಣನ ಆಗಮನ ರೈತರಲ್ಲಿ ಸಂತಸ ಮೂಡಿಸಿದೆ.