ಗೌಡರ 3ನೇ ತಲೆಮಾರಿನ ಎಂಟ್ರಿಗೆ ಕೈ ಬ್ರೇಕ್!

KannadaprabhaNewsNetwork |  
Published : Nov 24, 2024, 01:45 AM IST
ನಿಖಿಲ್ ಕಮಾರಸ್ವಾಮಿ | Kannada Prabha

ಸಾರಾಂಶ

ತಾತನ ಪ್ರಭಾವ, ತಂದೆ ಮಾಡಿದ ಅಭಿವೃದ್ಧಿ ಹಾಗೂ ತಾಯಿಯ ತ್ಯಾಗಕ್ಕೂ ಮರುಗದ ಚನ್ನಪಟ್ಟಣ ಕ್ಷೇತ್ರದ ಮತದಾರರು ಕಾಂಗ್ರೆಸ್ ನ ಸಿ.ಪಿ.ಯೋಗೇಶ್ವರ್‌ರವರ ಕೈ ಹಿಡಿದಿದ್ದರಿಂದ ಜೆಡಿಎಸ್‌ನ ನಿಖಿಲ್ ಕಮಾರಸ್ವಾಮಿ ಹೀನಾಯ ಸೋಲು ಅನುಭವಿಸುವಂತಾಗಿದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ತಾತನ ಪ್ರಭಾವ, ತಂದೆ ಮಾಡಿದ ಅಭಿವೃದ್ಧಿ ಹಾಗೂ ತಾಯಿಯ ತ್ಯಾಗಕ್ಕೂ ಮರುಗದ ಚನ್ನಪಟ್ಟಣ ಕ್ಷೇತ್ರದ ಮತದಾರರು ಕಾಂಗ್ರೆಸ್ ನ ಸಿ.ಪಿ.ಯೋಗೇಶ್ವರ್‌ರವರ ಕೈ ಹಿಡಿದಿದ್ದರಿಂದ ಜೆಡಿಎಸ್‌ನ ನಿಖಿಲ್ ಕಮಾರಸ್ವಾಮಿ ಹೀನಾಯ ಸೋಲು ಅನುಭವಿಸುವಂತಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ನಟಿ ಸುಮಲತಾ ವಿರುದ್ಧ ಸೋತಿದ್ದ ನಿಖಿಲ್ ತಂದೆಯವರ ಕರ್ಮಭೂಮಿಯಲ್ಲಿ ರಾಜಕೀಯ ಆಶ್ರಯ ಪಡೆಯುವ ತವಕದಲ್ಲಿದ್ದರು. ಮಗನ ರಾಜಕೀಯ ಭವಿಷ್ಯ ರೂಪಿಸಲು ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರ ತ್ಯಾಗ ಮಾಡಿದ್ದರು. ಆ ತ್ಯಾಗವೂ ಮಗನಿಗೆ ಫಲಿಸಿರಲಿಲ್ಲ.

2018ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದರು. ಆಗ ರಾಮನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇರಾದೆ ಹೊಂದಿದ್ದ ಅವರು ಒಲ್ಲದ ಮನಸ್ಸಿನಿಂದಲೇ ನಿಖಿಲ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ಜೆಡಿಎಸ್‌ನ ನಿಖಿಲ್ ಮತ್ತು ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ನಡುವಿನ ಹಣಾಹಣಿಯಿಂದಾಗಿ 2023ರ ರಾಮನಗರ ಕ್ಷೇತ್ರ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ತಮ್ಮ ತಂದೆಯ ಭದ್ರಕೋಟೆಯಲ್ಲಿಯೇ ನಿಖಿಲ್ (76,975), 10,715 ಮತಗಳ ಅಂತರದಿಂದ ಇಕ್ಬಾಲ್ ಎದುರು ಸೋಲೊಪ್ಪಿದ್ದರು.

ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಜಿಗಿದಿದ್ದರಿಂದ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅನಿವಾರ್ಯವಾಯಿತು.

ಕ್ರಮವಾಗಿ ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದ ನಿಖಿಲ್ ಹಾಗೂ ಯೋಗೇಶ್ವರ್ ಅವರಿಗೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಉಪಚುನಾವಣೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿತ್ತು. ಈ ಕಾರಣದಿಂದಾಗಿಯೇ ನಿಖಿಲ್ ಪರವಾಗಿ ತಾತ, ಮಾಜಿ ಪ್ರಧಾನಿ ದೇವೇಗೌಡ, ತಂದೆ ಕೇಂದ್ರ ಸಚಿವ ಕುಮಾರಸ್ವಾಮಿ, ತಾಯಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಪತ್ನಿ ರೇವತಿ ಸೇರಿ ದೋಸ್ತಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು.

ಚನ್ನಪಟ್ಟಣ ಕ್ಷೇತ್ರ ಗೆಲ್ಲುವುದು ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಕುಟುಂಬಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವವನ್ನು ಮರು ಸ್ಥಾಪಿಸಲು ದೇವೇಗೌಡರು ಹಾಗೂ ಜೆಡಿಎಸ್ ಪಕ್ಷವನ್ನು ಕ್ಲೀನ್ ಸ್ವೀಪ್ ಮಾಡಲು ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಪಣ ತೊಟ್ಟು ಹೋರಾಟ ನಡೆಸಿದರು.

ದೇವೇಗೌಡರು ತಮ್ಮ ಕುಟುಂಬದ 3ನೇ ತಲೆಮಾರಿನ ನಾಯಕನಾಗಿರುವ ಮೊಮ್ಮಗ ನಿಖಿಲ್‌ರ ರಾಜಕೀಯ ಭವಿಷ್ಯ ಭದ್ರ ಬಡಿಸಲು ಅನಾರೋಗ್ಯದ ನಡುವೆಯೂ ಅಖಾಡಕ್ಕೆ ಇಳಿದಿದ್ದರು. ಅವರಿಗೆ ಕುಮಾರಸ್ವಾಮಿ ಜೊತೆಗೆ ಬಿಜೆಪಿ ನಾಯಕರು ಬೆಂಬಲ ನೀಡಿದ್ದರು.

ಕುಮಾರಸ್ವಾಮಿಯವರ ಮಾಜಿ ಆಪ್ತ ಸ್ನೇಹಿತರು ಡಿಕೆ ಸಹೋದರರೊಂದಿಗೆ ಕೈ ಜೋಡಿಸಿ ಯೋಗೇಶ್ವರ್ ಗೆಲುವಿಗಾಗಿ ಟೊಂಕ ಕಟ್ಟಿ ನಿಂತರು. ಇಷ್ಟಕ್ಕೂ ಆ ಮಾಜಿ ಸ್ನೇಹಿತರೆಲ್ಲರು ದೇವೇಗೌಡರ ಗರಡಿಯಲ್ಲಿಯೇ ರಾಜಕಾರಣದ ಪಾಠ ಕಲಿತವರು. ಈಗ ಗುರುಗಳ ಮೊಮ್ಮಗನ ವಿರುದ್ಧವೇ ಅವರ ಶಿಷ್ಯರು ರಾಜಕೀಯ ಪಟ್ಟು ತೋರಿಸಿ ಯಶಸ್ಸು ಸಾಧಿಸಿದ್ದಾರೆ. ಆ ಮೂಲಕ ದೇವೇಗೌಡರ ಕುಟುಂಬದ 3ನೇ ತಲೆಮಾರಿನ ಎಂಟ್ರಿಗೆ ಕಾಂಗ್ರೆಸ್ ತಡೆಯೊಡ್ಡಿದಂತಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ