ಕನ್ನಡಪ್ರಭ ವಾರ್ತೆ ಕಾರವಾರ
ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯ ರಕ್ಷಣೆಯ ದೃಷ್ಟಿಯಿಂದ ಹಾಗೂ ಬಿರು ಬೇಸಿಗೆಯ ಹೊತ್ತಿನಲ್ಲಿ ಕೈಗೊಂಡಿರುವ ರೆಂಬೆಗಳ ಕಟಾವು ಕಾರ್ಯ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೈಗಾದಲ್ಲಿ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ದಿನೇ ದಿನೇ ಭಾರೀ ಯಂತ್ರೋಪಕರಣಗಳು ಹಾಗೂ ನಿರ್ಮಾಣ ಸಾಮಗ್ರಿ ಸಾಗಿಸುವ ಬೃಹತ್ ಲಾರಿಗಳ ದಟ್ಟಣೆ ಹೆಚ್ಚಾಗುತ್ತಿದೆ. ಸದ್ಯ ಬೃಹತ್ ಯಂತ್ರವೊಂದನ್ನು ಹೊತ್ತು ತಂದಿರುವ ಭಾರೀ ಗಾತ್ರದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಸಾಗಿಬಂದು, ಕಾರವಾರ ನಗರದಿಂದ ಸುಮಾರು 5 ಕಿಲೋಮೀಟರ್ ಹಿಂದಿರುವ ಅರಗಾದ ಹೆದ್ದಾರಿ ಬದಿಯಲ್ಲಿ ಬೀಡುಬಿಟ್ಟಿದೆ.ಈ ಯಂತ್ರವನ್ನು ನಗರ ಪ್ರದೇಶದಿಂದ ಕೈಗಾ ತಲುಪಿಸುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಮರಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ ಎಂಬ ಕಾರಣ ನೀಡಿ, ಇದೀಗ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆ ಮರಗಳನ್ನು ಬಲಿ ಕೊಡುವ ಬದಲು, ಕಾರವಾರ-ಕೈಗಾ ಮಾರ್ಗವನ್ನು ವೈಜ್ಞಾನಿಕವಾಗಿ ಅಗಲೀಕರಣಗೊಳಿಸುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.