ಕನ್ನಡಪ್ರಭ ವಾರ್ತೆ ವಿಜಯಪುರ

ಪತ್ರಿಕೆ ಹಾಗೂ ಮಾಧ್ಯಮಗಳ ಜವಾಬ್ದಾರಿ ಬಹಳ ದೊಡ್ಡದಿದ್ದು, ಅನ್ಯಾಯವಾದಾಗ ನ್ಯಾಯದ ಪರವಾಗಿ ಬೆಳಕಿಗೆ ತರುವ ಕೆಲಸ ಪತ್ರಕರ್ತರು ಮಾಡುತ್ತಾರೆ. ರಾಜ್ಯಕ್ಕಾಗಿ, ದೇಶಕ್ಕಾಗಿ, ನ್ಯಾಯ, ನೀತಿಯ ಪರವಾಗಿ ಪತ್ರಕರ್ತರ ಪೆನ್ನು ಓಡಬೇಕು. ಬಡವರ ಪರವಾಗಿ, ಅನ್ಯಾಯಕ್ಕೊಳಗಾದವರ ಪರವಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ದೇಶದಲ್ಲಿನ ಬಹುದೊಡ್ಡ ಹಗರಣಗಳು ಹೊರಬರಲು ಮಾಧ್ಯಮಗಳೇ ಪ್ರಮುಖ ಕಾರಣವಾಗಿವೆ. ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮಗಳು ಅತಿದೊಡ್ಡ ಕೊಡುಗೆ ನೀಡಿವೆ. ಮಾಧ್ಯಮಗಳು ಸತ್ಯ ಬರೆದರೆ ಮಾತ್ರ ಆ ದೇಶ ಉಳಿಯಲು ಸಾಧ್ಯ. ಇತ್ತೀಚೆಗೆ ಹೆಚ್ಚಾಗಿರುವ ಅನಧಿಕೃತ ಪತ್ರಕರ್ತರು, ಅನಧಿಕೃತ ಯೂಟ್ಯೂಬ್ ಹಾವಳಿ ನಿಲ್ಲಬೇಕಿದೆ. ಕೆಲವೊಂದು ಯೂಟ್ಯೂಬ್ ಗಳು ಪತ್ರಿಕೋದ್ಯಮದ ನೈತಿಕತೆಯಿಲ್ಲದೆ ವರದಿಗಳನ್ನು ಮಾಡಿ ಹಾವಳಿ ಮಾಡುತ್ತಿವೆ. ಈ ಕುರಿತು ನಾನು ಕೇಂದ್ರ ವಾರ್ತಾ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.

ಪ್ರತಿಭಾ ಪುರಸ್ಕಾರ ನೀಡಿದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಪ್ರಜಾಪ್ರಭುತ್ವದ ಸರ್ಕಾರ ಇದ್ದಲ್ಲಿ ಪತ್ರಿಕೋದ್ಯಮ ಬಹಳ ಪ್ರಮುಖವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾರಂಗ ನಾಲ್ಕನೇ ಅಂಗವಾಗಿದೆ. ಸತ್ಯದ ಪ್ರತಿಪ್ರಾದಕವಾಗಿ ಪತ್ರಿಕಾರಂಗ ಕೆಲಸ ಮಾಡುತ್ತಿದೆ. ವಿಜಯಪುರದ ಡಾ.ಫ.ಗು.ಹಳಕಟ್ಟಿಯವರು ಆಗಿನ ದಿನದಲ್ಲಿ ತಮ್ಮ ಮನೆಯನ್ನು ಮಾರಿ ಪತ್ರಿಕೆ ತೆರೆಯುವ ಮೂಲಕ ಸಾಮಾಜಿಕ ಸೇವೆ ಮಾಡುವವರಿಗೆ ಸ್ಫೂರ್ತಿ ನೀಡಿದ್ದರು. ಬಸವಣ್ಣನವರ ವಚನಗಳನ್ನು ನಾಡಿಗೆ ಕೊಡುವ ಮೂಲಕ ಪತ್ರಕರ್ತರು ಹೇಗೆ ಇರಬೇಕು ಎಂಬುದನ್ನು ಹಳಕಟ್ಟಿಯವರು ತೋರಿಸಿದ್ದಾರೆ. ಪತ್ರಕರ್ತರು ಯಾವುದೇ ಘಟನೆ ಜರುಗಿದಾಗ ಅದನ್ನು ಎರಡೂ ಬದಿಯಿಂದ ತನಿಖೆ ನಡೆಸಿ ವಾಸ್ತವದ ವರದಿ ಮಾಡಬೇಕು. ಈ ಮೂಲಕ ವಿಜಯಪುರದ ಗೋಳಗುಮ್ಮಟದಂತೆ ಎತ್ತರಕ್ಕೆ ಬೆಳೆಯಬೇಕು ಎಂದು ಶುಭ ಹಾರೈಸಿದರು. ಇದೇ ವೇಳೆ ಕಾನಿಪ ಸಂಘದ ಅಭಿವೃದ್ಧಿಗೆ ₹5 ಲಕ್ಷ ದೇಣೀಗೆ ನೀಡುವುದಾಗಿ ಘೋಷಿಸಿದರು.


ಕಾನಿಪ ಸಂಘದಿಂದ ಸತ್ಯದ ಪರ, ಅಭಿವೃದ್ಧಿಪರ ಸೇವೆ ಸಲ್ಲಿಸುವ ಪತ್ರಕರ್ತರನ್ನು ಗುರುತಿಸುವ ಕೆಲಸ ಆಗಬೇಕು. ಸದಾ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಒಂದೆಡೆ ಸೇರಬೇಕು. ಈ ವೇಳೆ ಪರಸ್ಪರ ಅನುಭವ ಹಂಚಿಕೊಂಡು, ಒತ್ತಡದಿಂದ ಮುಕ್ತರಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾನಿಪ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮೇಯರ್‌ ಎಂ.ಎಸ್.ಕರಡಿ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ ಆಗಮಿಸಿದ್ದರು. ವಿಶೇಷ ಆಹ್ವಾನಿತರಾಗಿ ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಗೊಂಡಿ ಆಗಮಿಸಿದ್ದರು. ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ವಾರ್ಷಿಕ ವರದಿ ಓದಿದರು.

ಪತ್ರಿಕಾ ದಿನಾಚರಣೆಯಲ್ಲಿ ಕಾನಿಪ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಹಿರಿಯ ಪತ್ರಕರ್ತರು, ಸರ್ವ ಸದಸ್ಯರು, ಕುಟುಂಬಸ್ಥರು ಭಾಗವಹಿಸಿದ್ದರು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ ಸ್ವಾಗತಿಸಿದರು. ಮಂಜುಳಾ ಹಿಪ್ಪರಗಿ ಪ್ರಾರ್ಥಿಸಿದರು. ಸಂಗೀತಾ ಮಠಪತಿ ನಿರೂಪಿಸಿದರು. ಕಾನಿಪ ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ ವಂದಿಸಿದರು.

ಹಣವುಳ್ಳವರು, ದಬ್ಬಾಳಿಕೆ ಮಾಡುವವರ ಕುರಿತು ಬಯಲಿಗೆಳೆಯುವ ಕೆಲಸವನ್ನು ಪತ್ರಿಕೆಗಳು, ಪತ್ರಕರ್ತರು ಮಾಡುತ್ತಿದ್ದಾರೆ. ಓರ್ವ ರಾಜಕಾರಣಿಯ ತಪ್ಪುನ್ನು ಪತ್ರಕರ್ತರು ಬೆಳಕಿಗೆ ತಂದಾಗ ದೊಡ್ಡ ದೊಡ್ಡ ರಾಜಕಾರಣಿಗಳು ರಾಜೀನಾಮೆ ನೀಡಿದ್ದಾರೆ. ಯಾವುದೇ ಒಂದು ಮಾಧ್ಯಮದಲ್ಲಿ ವರದಿ ಬಂದರೆ 100ಕ್ಕೆ 100ರಷ್ಟು ಅದು ಸತ್ಯ ಎಂದು ಜನರು ನಂಬುತ್ತಾರೆ, ಹಾಗಾಗಿ ವರದಿಗಳು ಪಾರದರ್ಶಕವಾಗಿರಬೇಕು.

- ಬಸನಗೌಡ ಪಾಟೀಲ ಯತ್ನಾಳ ಶಾಸಕರು ವಿಜಯಪುರ