ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಯಿ ಮಗುವಿಗೆ ಎದೆಹಾಲು ಉಣಿಸುವುದು ಪ್ರಕೃತಿದತ್ತವಾದ ಸಹಜ ಕ್ರಿಯೆ. ಇದು ಎಲ್ಲಾ ಪ್ರಾಣಿ ವರ್ಗಗಳಲ್ಲಿಯೂ ಇದೆ. ಆದರೆ ಮನುಷ್ಯರು ಆಧುನಿಕತೆಯಿಂದಾಗಿ ದಿನೇ ದಿನೇ ಮಗುವಿಗೆ ಎದೆಹಾಲು ಕುಡಿಸುವುದು ಕಡಿಮೆಯಾಗುತ್ತಿರುವುದು ಮಾನವ ಕುಲಕ್ಕೆ ಅತ್ಯಂತ ಅಪಾಯಕಾರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಹೇಳಿದರು.ಜೆಎಸ್‌ಎಸ್ ಮಹಾವಿದ್ಯಾಪೀಠ ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಜೆಎಸ್‌ಎಸ್ ಶಿಕ್ಷಣಸಂಸ್ಥೆಗಳ ಸಮುಚ್ಛಯ ಸಂಯುಕ್ತಾಶ್ರಯದಲ್ಲಿ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ-೨೦೨೫ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭೂಮಿ ಮೇಲೆ ಸಸ್ತನಿಗಳು ಹುಟ್ಟಿದ ಕಾಲದಿಂದಲೂ ಸ್ತನ್ಯಪಾನ ಎಂಬುದು ಸಹಜ ಪ್ರಕೃತಿದತ್ತವಾದ ಕ್ರಿಯೆಯಾಗಿದೆ. ಪ್ರಾಣಿಗಳಿಗೆ ಯಾರು ಹೇಳಿಕೊಡಬೇಕಾಗಿಲ್ಲ ಅವು ಸಹಜ ಕ್ರಿಯೆ ನಡೆಸುತ್ತವೆ. ಆದರೆ ಮನುಷ್ಯರಿಗೆ ಇದರ ಬಗ್ಗೆ ಹೇಳಿಕೊಡುವ ಅರಿವು ಮೂಡಿಸುವ ದುಸ್ಥಿತಿ ಬಂದಿದೆ. ಇದಕ್ಕಾಗಿಯೇ ಸ್ತನ್ಯಪಾನ ಕ್ರಿಯೆಗಾಗಿ ವಿಶ್ವ ಒಕ್ಕೂಟ ರಚಿಸಿಕೊಂಡು ಪ್ರತಿ ವರ್ಷ ಆಗಸ್ಟ್ ೧ ರಿಂದ ಆಗಸ್ಟ್ ೭ರವರೆಗೆ ಸುಮಾರು ೧೨೧ ದೇಶಗಳಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ ಎಂದರು.ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅತ್ಯಗತ್ಯ. ಹುಟ್ಟಿದ ಮಗುವು ಆರೋಗ್ಯಯುತವಾಗಿ ಬೆಳೆಯಲು ತಾಯಿಯ ಎದೆಹಾಲು ಅತ್ಯಂತ ಅವಶ್ಯಕವಾಗಿದೆ. ಮಗುವಿನ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶ ಮತ್ತು ಕಾರ್ಬೋಹೈಡ್ರೇಟ್‌ಗಳು ಎದೆ ಹಾಲಿನಲ್ಲಿ ಹೇರಳವಾಗಿದೆ ಎಂದರು.
ಮಹಿಳೆಯರು ತಮ್ಮ ಸೌಂದರ್ಯದ ದೃಷ್ಟಿಯಿಂದ ಎದೆ ಹಾಲು ಕುಡಿಸದೇ ಬೇರೆ ಬೇರೆ ಅಹಾರಗಳಿಗೆ ಮೊರೆ ಹೋಗುತ್ತಿದ್ದಾರೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ಎದೆಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ತಾಯಿಯ ಎದೆಹಾಲು ಅಮೃತಕ್ಕೆ ಸಮ. ಎದೆಹಾಲು ಉಣಿಸುವ ಪ್ರಕ್ರಿಯೆಯಿಂದ ತಾಯಿ ಹಾಗೂ ಮಗುವಿನ ಬಂಧವು ಹೆಚ್ಚಾಗುವುದರ ಜೊತೆಗೆ ಆ ಮಗುವು ಬುದ್ದಿವಂತವಾಗಿ ಬೆಳೆಯುತ್ತದೆ ಎಂದರು.ಹೆರಿಗೆ ಆದ ಆರು ತಿಂಗಳು ಎದೆ ಹಾಲು ಬಿಟ್ಟು ಬೇರೆ ಏನನ್ನೂ ಕೊಡಬಾರದು. ನಂತರ ಕ್ರಮೇಣ ಘನ ಆಹಾರಗಳನ್ನು ಶಿಶುವಿಗೆ ನೀಡಬಹುದು. ಆದರೆ ತಾಯಿಯ ಹಾಲನ್ನು ನಿಲ್ಲಿಸಬಾರದು, ಸಹಜ ಹೆರಿಗೆಯ ನೋವು ಅನುಭವಿಸಬಾರದು ಎಂದು ಶಸ್ತ್ರ ಚಿಕಿತ್ಸೆ ಮೊರೆ ಹೋಗುತ್ತಿರುವುದು ಹೆಚ್ಚಿದ್ದು ಇದು ಎದೆಹಾಲು ಉತ್ಪತ್ತಿಯ ಮೇಲು ಪರಿಣಾಮ ಬೀರುತ್ತದೆ ಎಂದರು.ಮೊದಲ ದಿನ ಬರುವ ಗಿಣ್ಣಾಲು ನಂತರ ಆರು ತಿಂಗಳು ಬರುವ ಎದೆಹಾಲು ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನೂ ಒದಗಿಸುತ್ತದೆ . ಕಾಲಕಾಲಕ್ಕೆ ಬೆಳೆಯುತ್ತಾ ಬರುವ ಶಿಶುವಿನ ಜಠರದ ಸಾಮರ್ಥ್ಯಕ್ಕೆ ಹೊಂದುವಂತೆ ತಾಯಿಯ ಹಾಲೂ ಒದಗಿ ಬರುತ್ತದೆ.ಶಿಶುವಿನ ಆರಂಭಿಕ ದಿನಗಳಲ್ಲಿ ಅಗತ್ಯವಾಗಿ ಬೇಕಾದ ರೋಗನಿರೋಧಕ ಶಕ್ತಿಯನ್ನು ನೀಡುವುದು ತಾಯಿಯ ಹಾಲೇ ಹೊರತು ಬೇರೆ ಯಾವುದೂ ಅಲ್ಲ. ಅದರಲ್ಲೂ ಮೊದಲೆರೆಡು ದಿನಗಳು ಮಗುವಿಗೆ ಸಿಗುವ ಹಾಲಿನಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ಆದ್ದರಿಂದ ಇದರ ಬಗ್ಗೆ ನರ್ಸಿಂಗ್ ವಿದ್ಯಾರ್ಥಿಗಳಾದ ನೀವು ತಿಳಿದು ಕೊಂಡು ಅರಿವು ಮೂಡಿಸಿ ಎಂದರು.
ಜಿಲ್ಲಾ ತಾಯಿ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ. ರಾಜೇಶ್ ಕುಮಾರ್ ಎಂ. ಎಸ್. ಮಾತನಾಡಿ, ಶಿಶುಗಳಿಂದ ಹಿಡಿದು ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸ್ತನ್ಯಪಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ಇಂದಿನ ಮಹಿಳೆಯರು ಕೆಲಸಕ್ಕೆ ಹೋಗುವುದರಿಂದ ಅಥವಾ ಸೌಂದರ್ಯವು ಮಾಸುತ್ತದೆ ಎನ್ನುವ ಕಾರಣದಿಂದಾಗಿ ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಾರೆ. ಆದರೆ ಹೀಗಾಗಿ ಎದೆಹಾಲಿನ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದರು.ಹಾಲುಣಿಸುವ ಸಂದರ್ಭದಲ್ಲಿ ಶಿಶುಗಳಿಗೆ ಒದಗುವ ತಾಯಿಯ ಸಾಮೀಪ್ಯ ಮತ್ತು ಸ್ಪರ್ಶವೂ ಇದಕ್ಕೆ ಬಹು ಮುಖ್ಯ ಕಾರಣ. ಇದೊಂದು ವರ್ಷದಲ್ಲಿ ಮಕ್ಕಳಿಗೆ ದೊರೆಯುವ ಈ ಅಮೂಲ್ಯ ಪೋಷಕಾಂಶದಿಂದ ದೀರ್ಘಕಾಲೀನ ಬೆಳಗಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಸಹ ಪ್ರಾಧ್ಯಾಪಕಿ ಡಾ. ಅಂಬಿಕಾ ಕೆ. ಮಾತನಾಡಿ, ತಾಯಿಯ ಹಾಲು ಅಮೃತಕ್ಕೆ ಸಮ, ಇದು ಚಿನ್ನದ ಹನಿ, ಸ್ತನ ಕ್ಯಾನ್ಸರ್‌ನ್ನು ಕಡಿಮೆ ಮಾಡುತ್ತದೆ, ಸಮಾಜದ ಆರೋಗ್ಯಕಾರಿ ಬೆಳವಣಿಗೆ ಎದೆ ಹಾಲುಣಿಸುವುದು ಅತ್ಯಗತ್ಯ ಎಂದರು.ಸ್ತನ್ಯಪಾನಕ್ಕೆ ಆದ್ಯತೆ ನೀಡಿ, ಸುಸ್ಥಿರ ಬೆಂಬಲ ವ್ಯವಸ್ಥೆಗಳನ್ನು ರಚಿಸಿ ಈ ವರ್ಷದ ಘೋಷವಾಕ್ಯವಾದಡಿಯಲ್ಲಿ ಸ್ತನ್ಯಪಾನವನ್ನು ಸುಸ್ಥಿರಗೊಳಿಸಲು, ನಮ್ಮ ಆಸ್ಪತ್ರೆಗಳು, ಸಮುದಾಯಗಳು, ನೀತಿಗಳು ಮತ್ತು ಮನೆಗಳಲ್ಲಿ ಸುಸ್ಥಿರ ಬೆಂಬಲ ವ್ಯವಸ್ಥೆಗಳನ್ನು ನಿರ್ಮಿಸಬೇಕು ಎಂದರು.ಪ್ರಾಂಶುಪಾಲ ವಿನಯಕುಮಾರ್ ಜಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.