ಕೊಡಗು ಕಿತ್ತಳೆ ಪುನಶ್ಚೇತನಕ್ಕೆ ತಳಿ ಅಭಿವೃದ್ಧಿ ತರಬೇತಿ

KannadaprabhaNewsNetwork |  
Published : Nov 10, 2026, 01:30 AM IST
ಚಿತ್ರ :  8ಎಂಡಿಕೆ4 : ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ತಳಿ ಅಭಿವೃದ್ಧಿ ತರಬೇತಿ ಕಾರ್ಯಕ್ರಮ.  | Kannada Prabha

ಸಾರಾಂಶ

ಕೊಡಗಿನ ಮಣ್ಣಿನ ಸೊಗಡು, ಹವಾಮಾನದ ವಿಶೇಷತೆ ಹಾಗೂ ವಿಶಿಷ್ಟ ರುಚಿ-ಪರಿಮಳದಿಂದ ನಾಡಿನಲ್ಲೇ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಕೊಡಗಿನ ಕಿತ್ತಳೆ ಕೃಷಿ ಇಂದು ಪುನಶ್ಚೇತನದ ನಿರೀಕ್ಷೆಯಲ್ಲಿದೆ. ಒಂದು ಕಾಲದಲ್ಲಿ ಕೊಡಗಿನ ಕಾಫಿ ತೋಟಗಳ ಅವಿಭಾಜ್ಯ ಭಾಗವಾಗಿದ್ದ ಈ ಸಾಂಪ್ರದಾಯಿಕ ಹಣ್ಣಿನ ಬೆಳೆಯನ್ನು ಮತ್ತೆ ಸಮೃದ್ಧಗೊಳಿಸಿ, ಗುಣಮಟ್ಟದ ಸಸಿಗಳ ಉತ್ಪಾದನೆ ಹಾಗೂ ನರ್ಸರಿ ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚೆಟ್ಟಳ್ಳಿಯ ಐಸಿಎಆರ್–ಐಐಎಚ್‌ಆರ್ ಕೇಂದ್ರ ಮಹತ್ವದ ಹೆಜ್ಜೆಯಿಟ್ಟಿದೆ.

ಮಡಿಕೇರಿ : ಕೊಡಗಿನ ಮಣ್ಣಿನ ಸೊಗಡು, ಹವಾಮಾನದ ವಿಶೇಷತೆ ಹಾಗೂ ವಿಶಿಷ್ಟ ರುಚಿ-ಪರಿಮಳದಿಂದ ನಾಡಿನಲ್ಲೇ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಕೊಡಗಿನ ಕಿತ್ತಳೆ ಕೃಷಿ ಇಂದು ಪುನಶ್ಚೇತನದ ನಿರೀಕ್ಷೆಯಲ್ಲಿದೆ. ಒಂದು ಕಾಲದಲ್ಲಿ ಕೊಡಗಿನ ಕಾಫಿ ತೋಟಗಳ ಅವಿಭಾಜ್ಯ ಭಾಗವಾಗಿದ್ದ ಈ ಸಾಂಪ್ರದಾಯಿಕ ಹಣ್ಣಿನ ಬೆಳೆಯನ್ನು ಮತ್ತೆ ಸಮೃದ್ಧಗೊಳಿಸಿ, ಗುಣಮಟ್ಟದ ಸಸಿಗಳ ಉತ್ಪಾದನೆ ಹಾಗೂ ನರ್ಸರಿ ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚೆಟ್ಟಳ್ಳಿಯ ಐಸಿಎಆರ್–ಐಐಎಚ್‌ಆರ್ ಕೇಂದ್ರ ಮಹತ್ವದ ಹೆಜ್ಜೆಯಿಟ್ಟಿದೆ.ಕೊಡಗಿನ ಕಿತ್ತಳೆ (ಕೂರ್ಗ್ ಮ್ಯಾಂಡರಿನ್) ತನ್ನ ವಿಶಿಷ್ಟ ರುಚಿ, ಸುವಾಸನೆ ಹಾಗೂ ಗುಣಮಟ್ಟದಿಂದ ಪ್ರಸಿದ್ಧವಾಗಿದೆ. ಮಧ್ಯಮ ಗಾತ್ರದ ಹಣ್ಣುಗಳು, ಹಳದಿ ಮಿಶ್ರಿತ ಕಿತ್ತಳೆ ಬಣ್ಣ, ರಸಭರಿತ ತಿರುಳು ಹಾಗೂ ಸಿಹಿ-ಹುಳಿ ಮಿಶ್ರಿತ ವಿಶಿಷ್ಟ ರುಚಿ ಇದರ ವಿಶೇಷತೆ. ಕೊಡಗಿನ ಹವಾಮಾನ ಮತ್ತು ಕೃಷಿ ಪರಿಸರಕ್ಕೆ ಹೊಂದಿಕೊಂಡಿರುವ ಈ ತಳಿ ದಕ್ಷಿಣ ಭಾರತದ ಪ್ರಮುಖ ಮ್ಯಾಂಡರಿನ್ ಕಿತ್ತಳೆ ತಳಿಗಳಲ್ಲಿ ಒಂದಾಗಿದೆ. 2006ರಲ್ಲಿ ಭೌಗೋಳಿಕ ಗುರುತಿನ (ಜಿಐ) ಮಾನ್ಯತೆಯನ್ನೂ ಪಡೆದಿದೆ.ಈ ಹೆಮ್ಮೆಯ ಬೆಳೆಯ ಪುನಶ್ಚೇತನ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ವೈಜ್ಞಾನಿಕ ನರ್ಸರಿ ನಿರ್ವಹಣೆ ಮತ್ತು ಉದ್ಯಮಶೀಲತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅ.28ರಿಂದ ನ. 3ರ ವರೆಗೆ ಚೆಟ್ಟಳ್ಳಿಯ ಐಸಿಎಆರ್-ಐಐಎಚ್‌ಆರ್ ಕೇಂದ್ರದಲ್ಲಿ ಏಳು ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಡೆದ ಕಾರ್ಯಕ್ರಮದಲ್ಲಿ ರೈತರು ಸೇರಿದಂತೆ 20 ಮಂದಿ ಭಾಗವಹಿಸಿದ್ದರು.ಬೆಂಗಳೂರಿನ ಐಸಿಎಆರ್-ಐಐಎಚ್‌ಆರ್ ನಿರ್ದೇಶಕ ಪ್ರೊ. ತುಷಾರ್ ಕಾಂತಿ ಬೆಹೆರಾ ಅವರು ವರ್ಚುವಲ್ ಮೂಲಕ ತರಬೇತಿ ಉದ್ಘಾಟಿಸಿದರು. ಕಾಫಿ ಮಂಡಳಿಯ ಚೆಟ್ಟಳ್ಳಿ ಸಂಶೋಧನಾ ಉಪಕೇಂದ್ರದ ಜಂಟಿ ನಿರ್ದೇಶಕ ಡಾ. ಸಿ. ಬಾಬು ಮುಖ್ಯ ಅತಿಥಿಯಾಗಿ, ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ ನಿರ್ದೇಶಕ ವೈ.ಬಿ. ವೆಂಕಟ್ ರೆಡ್ಡಿ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಮುರಳೀಧರ ಬಿ.ಎಂ. ಉಪಸ್ಥಿತರಿದ್ದರು.

ತರಬೇತಿಯಲ್ಲಿ ಗುಣಮಟ್ಟದ ಸಸಿ ಉತ್ಪಾದನೆ, ಹಣ್ಣಿನ ಹಾಗೂ ಸಾಂಬಾರ ಬೆಳೆಗಳ ಪ್ರಸರಣ ವಿಧಾನಗಳು, ಬೇರುಕಾಂಡಗಳ ಆಯ್ಕೆ, ಸಂರಕ್ಷಿತ ಕೃಷಿ ರಚನೆಗಳು, ಬೆಳವಣಿಗೆ ಮಾಧ್ಯಮ, ಸಸ್ಯವರ್ಧಕಗಳು, ಪೋಷಕಾಂಶ ಮತ್ತು ನೀರಿನ ನಿರ್ವಹಣೆ, ಕೀಟ-ರೋಗ ನಿಯಂತ್ರಣ, ಮಾತೃಸಸ್ಯ ತಾಕು ಸ್ಥಾಪನೆ, ತೋಟ ನಿರ್ವಹಣೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಕುರಿತು ವಿಜ್ಞಾನಿಗಳು ತಾಂತ್ರಿಕ ಮಾಹಿತಿ ನೀಡಿದರು.ಗೂಟಿ ಕಟ್ಟುವುದು, ಕಸಿ ಹಾಗೂ ಮೊಗ್ಗು ಕಸಿ ತಂತ್ರಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಅಪ್ಪಂಗಳದ ಐಸಿಎಆರ್–ಐಐಎಸ್‌ಆರ್ ಹಾಗೂ ಚೆಟ್ಟಳ್ಳಿಯ ಕಾಫಿ ಮಂಡಳಿ ಸಂಶೋಧನಾ ಉಪಕೇಂದ್ರಕ್ಕೆ ಕ್ಷೇತ್ರ ಭೇಟಿ ಏರ್ಪಡಿಸಿ ಕಾಳುಮೆಣಸು, ಏಲಕ್ಕಿ ಮತ್ತು ಕಾಫಿ ಬೆಳೆಗಳ ಸಸ್ಯ ಪ್ರಸರಣ ವಿಧಾನಗಳ ಪರಿಚಯ ಮಾಡಿ ಕೊಡಲಾಯಿತು.ನ. 3ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮುತ್ತಪ್ಪ ಬಿ.ಎಸ್. ಹಾಗೂ ಡಾ. ಮುರಳೀಧರ ಬಿ.ಎಂ. ಉಪಸ್ಥಿತರಿದ್ದರು. ತರಬೇತಿಯಲ್ಲಿ ಪಡೆದ ಅನುಭವ ಹಾಗೂ ಜ್ಞಾನವನ್ನು ಶಿಬಿರಾರ್ಥಿಗಳು ಹಂಚಿಕೊಂಡರು.

ಕಾಫಿ ತೋಟಗಳ ನಡುವೆ ಕಿತ್ತಳೆ ಕೃಷಿಯ ಪರಂಪರೆಯನ್ನು ಮತ್ತೆ ಜೀವಂತಗೊಳಿಸುವುದರೊಂದಿಗೆ, ಗುಣಮಟ್ಟದ ಸಸಿ ಉತ್ಪಾದನೆ, ವೈಜ್ಞಾನಿಕ ಕೃಷಿ ಪದ್ಧತಿ ಮತ್ತು ನರ್ಸರಿ ಉದ್ಯಮ ಶೀಲತೆಯ ಮೂಲಕ ಕೊಡಗಿನ ಕಿತ್ತಳೆಗೆ ಹೊಸ ಭವಿಷ್ಯ ರೂಪಿಸುವ ಆಶಯ ಈ ತರಬೇತಿಯದ್ದಾಗಿದೆನ್ನುತ್ತಾರೆ ಕೇಂದ್ರದ ಮುಖ್ಯಸ್ಥ ಡಾ. ಮುರುಳಿಧರ್ ಬಿ.ಎಂ.

ಬಾಕ್ಸ್ಕೊಡಗಿನ ಕಿತ್ತಳೆಯಲ್ಲಿ ವೈಜ್ಞಾನಿಕ ನರ್ಸರಿ ನಿರ್ವಹಣೆ ಕುರಿತ ಕನ್ನಡ ಮತ್ತು ಇಂಗ್ಲಿಷ್‌ನ ಎರಡು ಮಾಹಿತಿ ಕೈಪಿಡಿಗಳು ಹಾಗೂ ತೋಟಗಾರಿಕಾ ಬೆಳೆಗಳ ವೈಜ್ಞಾನಿಕ ನರ್ಸರಿ ನಿರ್ವಹಣೆ ಕುರಿತ ಇ-ಮ್ಯಾನುಯಲ್ ಬಿಡುಗಡೆ ಮಾಡಲಾಯಿತು. ತರಬೇತಿ ಕಿಟ್ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.ನರ್ಸರಿ ನಿರ್ವಹಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಚಾಮರಾಜನಗರ ಜಿಲ್ಲೆಯ ಕುಂತೂರುಮೋಳೆ ಗ್ರಾಮದ ಮನೋಜ್ ಜೆ. ಹಾಗೂ ಕರಡಿಮೋಳೆ ಗ್ರಾಮದ ಸಾಗರ್ ಎನ್. ಅವರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ