ವಿಶ್ವಕರ್ಮ ಕೌಶಲ್ಯ, ಪರಿಶ್ರಮದ ಸಂಕೇತ: ಜಗದೀಶ್ ಜೋಡುಬೀಟಿ

KannadaprabhaNewsNetwork |  
Published : Nov 10, 2026, 01:30 AM IST
ಚಿತ್ರ: 8ಎಂಡಿಕೆ9 : ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿಶ್ವಕರ್ಮ ಎಂಬ ಹೆಸರು ಕೇವಲ ಒಂದು ಧಾರ್ಮಿಕ ಪರಿಕಲ್ಪನೆಯಲ್ಲ. ಅದು ಸೃಜನಶೀಲತೆ, ನಿರ್ಮಾಣಶಕ್ತಿ, ಕೌಶಲ್ಯ ಮತ್ತು ಪರಿಶ್ರಮದ ಸಂಕೇತವಾಗಿದೆ ಎಂದು ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಅಧ್ಯಕ್ಷ ಜಗದೀಶ್ ಜೋಡುಬೀಟಿ ತಿಳಿಸಿದರು.

ಗೋಣಿಕೊಪ್ಪ : ವಿಶ್ವಕರ್ಮ ಎಂಬ ಹೆಸರು ಕೇವಲ ಒಂದು ಧಾರ್ಮಿಕ ಪರಿಕಲ್ಪನೆಯಲ್ಲ. ಅದು ಸೃಜನಶೀಲತೆ, ನಿರ್ಮಾಣಶಕ್ತಿ, ಕೌಶಲ್ಯ ಮತ್ತು ಪರಿಶ್ರಮದ ಸಂಕೇತವಾಗಿದೆ ಎಂದು ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಅಧ್ಯಕ್ಷ ಜಗದೀಶ್ ಜೋಡುಬೀಟಿ ತಿಳಿಸಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ಪಿ.ಎಸ್. ಬೀರಪ್ಪ, ದಿವಂಗತ ಪುಟ್ಟಮ್ಮ ಹಾಗೂ ದಿವಂಗತ ಹೆಬ್ಬಾಲೆ ನಂಜಾಚಾರ್ ದತ್ತಿ ಕಾರ್ಯಕ್ರಮದಲ್ಲಿ ‘ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ’ ವಿಷಯವಾಗಿ ಅವರು ಉಪನ್ಯಾಸ ನೀಡಿದರು.

ವಿಶ್ವಕರ್ಮರು ಕೇವಲ ವಸ್ತುಗಳನ್ನು ನಿರ್ಮಿಸಿದವರಲ್ಲ. ಅವರು ಸಮಾಜದ ಬದುಕಿಗೆ ರೂಪ ಕೊಟ್ಟವರು. ಕಲ್ಲಿಗೆ ಕಲೆಯ ರೂಪ ನೀಡಿದವರು, ಮರಕ್ಕೆ ಜೀವ ತುಂಬಿದವರು, ಲೋಹಕ್ಕೆ ಉಪಯುಕ್ತತೆ ನೀಡಿದವರು. ತಮ್ಮ ಕೌಶಲ್ಯದ ಮೂಲಕ ನಾಗರಿಕತೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವಿಶ್ವಕರ್ಮ ಸಮುದಾಯದ ಸೇವೆಯನ್ನು ಸ್ಮರಿಸಿದರು.ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯ ಎಚ್.ಕೆ. ಕುಮಾರ್ ಅವರು ‘ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ’ ವಿಷಯ ಉಪನ್ಯಾಸ ನೀಡಿ, ಶಿಕ್ಷಣವೆಂಬುದು ಪ್ರತಿಯೊಬ್ಬ ಮನುಷ್ಯನ ಬದುಕಿನ ಅತ್ಯಮೂಲ್ಯ ಆಸ್ತಿ ಎಂದರು.ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಉದ್ಘಾಟಿಸಿ ಮಾತನಾಡಿ, ಮನಸ್ಸಿನ ಇಚ್ಛೆಗೆ ಅನುಗುಣವಾಗಿ ಕನ್ನಡ ಮಾತನಾಡುವುದನ್ನು ಪ್ರೀತಿಸಬೇಕು ಎಂದರು.

ನಿವೃತ್ತ ಶಿಕ್ಷಕ ಕುಶಾಲಪ್ಪ ಮಾತನಾಡಿ, ಕನ್ನಡವನ್ನು ಪ್ರೀತಿಸುವುದನ್ನು ಮತ್ತು ಮಾತನಾಡುವುದನ್ನು ಬದುಕಿನ ಉಸಿರಾಗಿಸಿಕೊಳ್ಳಬೇಕು ಎಂದು ಹೇಳಿದರು.ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಕಟ್ಟುವ ಕೆಲಸ ಮಕ್ಕಳ ಕೈಯಲ್ಲಿದೆ. ಆ ಜವಾಬ್ದಾರಿಯನ್ನು ಓದಿನ ಮೂಲಕ ಮಕ್ಕಳು ಸಾಬೀತುಪಡಿಸಬೇಕು ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಕೆ.ಪಿ. ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ವಿ.ಟಿ. ಮಂಜುನಾಥ್, ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಕೆ. ಮಣಿಕಂಠ, ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಕಾಮತ್, ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಮಕೃಷ್ಣ, ಸದಸ್ಯ ಚಂದನ್ ಕಾಮತ್ ಮತ್ತಿತರರಿದ್ದರು.ಜಿಲ್ಲೆಯ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶನಿವಾರಸಂತೆಯ ಶ್ರೀ ವಿಶ್ವೇಶ್ವರ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಎಚ್.ಕೆ. ನವ್ಯ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ