ನಾಪೋಕ್ಲು : ಕೊಡಗಿನ ಪ್ರಸಿದ್ಧ ಸುಗ್ಗಿಯ ಸಂಭ್ರಮದ ಹುತ್ತರಿ ಹಬ್ಬವನ್ನು ನ. 25 ರಂದು ಆಚರಿಸಲು ಸೋಮವಾರ ಮುಹೂರ್ತ ನಿಶ್ಚಯಿಸಲಾಗಿದೆ.
ಸಾರ್ವಜನಿಕರಿಗಾಗಿ ನಿಗದಿಪಡಿಸಿದ ಸಮಯ: ನ. 25 ರಾತ್ರಿ 6:25 ಗಂಟೆಗೆ - ನೆರೆ ಕಟ್ಟುವುದು. ರಾತ್ರಿ 7:25 ಗಂಟೆಗೆ - ಕದಿರು ತೆಗೆಯುವುದು. ರಾತ್ರಿ 8:25 ಗಂಟೆಗೆ - ಊಟೋಪಚಾರ.
ಇದಕ್ಕೂ ಮುನ್ನ ದಿನವಾದ ನ. 24 ಮಂಗಳವಾರ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ‘ಕಲ್ಲಾಡ್ಚ ಹಬ್ಬ’ ನಡೆಯಲಿದೆ. ಜ್ಯೋತಿಷ್ಯ ಶಶಿಕುಮಾರ್ ಹಾಗೂ ಕಣಿಯರ ನಾಣಯ್ಯ ಕುಟುಂಬದವರು ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿದ ಬಳಿಕ, ದೇವ ತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ದಿನ ನಿಗದಿ ಪಟ್ಟಿಗೆ ವಿಶೇಷ ಪೂಜೆ ನೆರವೇರಿಸಿ, ಅರ್ಚಕ ಜಗದೀಶ್ ಅವರು ತೀರ್ಥ ಪ್ರಸಾದ ನೀಡಿ ದೇವ ತಕ್ಕ ಅವರಿಗೆ ಹಸ್ತಾಂತರಿಸಿದರು.ಈ ವೇಳೆ ವೇಳಾಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಭಕ್ತ ಜನ ಸಂಘದ ಅಧ್ಯಕ್ಷ ಹಾಗೂ ದೇವ ತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ಅವರು, ‘ಹುತ್ತರಿ ಹಬ್ಬದ ಆಚರಣೆ ಜಿಲ್ಲೆಗೆ ವಿಶಿಷ್ಟವಾಗಿದೆ. ಸುಗ್ಗಿಯ ಹಬ್ಬವಾದ ಧಾನ್ಯಲಕ್ಷ್ಮಿಯನ್ನು ಮನೆಗೆ ಕರೆತರುವ ಈ ಹಬ್ಬವನ್ನು ಎಲ್ಲರೂ ನಿಗದಿಪಡಿಸಿದ ಸಮಯದಲ್ಲೇ ಆಚರಿಸಬೇಕು. ಇಂದಿನಿಂದ ದೇಶಕಟ್ಟನ್ನು ಎಲ್ಲರೂ ಪಾಲಿಸಿ, ಹಿರಿಯರ ಕಾಲದಿಂದಲೂ ಬಂದಿರುವ ಆಚರಣೆಯನ್ನು ಯಥಾವತ್ತಾಗಿ ಮುಂದುವರಿಸಿ’ ಎಂದು ಕರೆ ನೀಡಿ, ಹಬ್ಬದ ಕಟ್ಟುಪಾಡುಗಳ ಕುರಿತು ಮಾಹಿತಿ ನೀಡಿದರು.ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ನಿರ್ದೇಶಕರು, ಭಕ್ತ ಜನ ಸಂಘದ ಉಪಾಧ್ಯಕ್ಷ ಕಲ್ಯಾಟಂಡ ರಾಜ, ಕಾರ್ಯದರ್ಶಿ ಬಟ್ಟೀರ ಚೋಂದಮ್ಮ, ಇತರ ನಿರ್ದೇಶಕರು, ತಕ್ಕ ಮುಖ್ಯಸ್ಥರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಉಪಸ್ಥಿತರಿದ್ದರು.