ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗುಳೇದಗುಡ್ಡ ಪಟ್ಟಣದಿಂದ ಆಸಂಗಿ ಗ್ರಾಮಕ್ಕೆ ತೆರಳುವ ದರ್ಗಾ ಹತ್ತಿರದ ಸೇತುವೆ ಹಾಗೂ ಪಟ್ಟಣದಿಂದ ಪರ್ವತಿಗೆ ತೆರಳುವ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ಪರ್ವತಿ, ಆಸಂಗಿ ಹಾಗೂ ಕಟಗಿನಹಳ್ಳಿ ಗ್ರಾಮಗಳಿಂದ ಗುಳೇದಗುಡ್ಡ ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲತೆ ಉಂಟಾಗಿದೆ. ಗುರುವಾರ ವಾರದ ಸಂತೆ ಇದ್ದು, ರೈತರು ತರಕಾರಿ ಮಾರಾಟಕ್ಕೆ ತರಲು ಸಾಕಷ್ಟು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಯಿತು.
ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸಾರ್ವಜನಿಕರು ಪರ್ವತಿ, ಆಸಂಗಿ, ಲಾಯದಗುಂದಿ, ಕಟಗಿನಹಳ್ಳಿ ,ನಾಗರಾಳ ಗ್ರಾಮಕ್ಕೆ ತೆರಳಲು ಗುರುವಾರ ಬಹಳಷ್ಟು ಸಮಸ್ಯೆ ಎದುರಿಸಿದರು. ಎರಡು ಸೇತುವೆಗಳ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದ್ದರೂ ಯುವಕರು ಸೈಕಲ್, ಬೈಕ್ ಹಾಗೂ ಕಾಲ್ನಡಿಗೆ ಮೂಲಕ ಸೇತುವೆ ದಾಟುವ ದುಸ್ಸಾಹಸ ನಡೆಸಿದ್ದಾರೆ. ಗುಳೇದಗುಡ್ಡದಿಂದ ಆಸಂಗಿ, ಲಾಯದಗುಂದಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದ ಸೇತುವೆ ಮೇಲೆ ಹೆಚ್ಚಿನ ನೀರು ಹರಿಯುತ್ತಿದ್ದು, ಪುರಸಭೆಯವರು ಸೇತುವೆ ಮೇಲೆ ಯಾರೂ ತೆರಳದಂತೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದನ್ನು ನೋಡಲು ಪಟ್ಟಣದ ಜನತೆ ತಂಡೋಪಂಡವಾಗಿ ಆಗಮಿಸುತ್ತಿದ್ದಾರೆ.