ಮಂಗಳೂರು: ನಾರಿ ಶಕ್ತಿ ವಂದನ್ ಅಧಿನಿಯವನ್ನು ಸಂಸತ್ ಅಧಿವೇಶನದಲ್ಲಿ ಪಾಸ್ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ ಕಾಂಗ್ರೆಸ್ ಮತ್ತು ವಿಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಅಧಿನಿಯಮದ ವಿರುದ್ಧವಾಗಿ ಮತ ಹಾಕಿ ಸೋಲಿಸಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಮೀಸಲಾತಿ ನೀಡುವ ನಾರಿ ಶಕ್ತಿ ವಂದನ್ ಅಧಿನಿಯಮದ ಪರವಾಗಿ ಇದ್ದೇವೆ ಎಂದು 2023ರಲ್ಲಿ ತಿಳಿಸಿದ್ದ ಕಾಂಗ್ರೆಸ್ ಇದೀಗ ಅಧಿನಿಯಮ ಪಾಸ್ ಮಾಡುವ ವೇಳೆ ವಿರುದ್ಧವಾಗಿ ನಡೆದುಕೊಂಡಿದೆ. ಅಧಿನಿಯಮ ಪಾಸ್ ಮಾಡುವ ಮೊದಲು ಯಾವುದೇ ವಿರೋಧ ಪಕ್ಷ ತಿದ್ದುಪಡಿಯ ಸಲಹೆ ನೀಡಿಲ್ಲ. ಈ ರೀತಿ ಬದಲಾವಣೆ ಆದರೆ ಪಾಸ್ ಮಾಡುತ್ತೇವೆ ಎಂದಿಲ್ಲ. ರಾಜ್ಯಗಳಿಗೆ ಶೇ.50 ಸ್ಥಾನ ವೃದ್ಧಿ ಬೇಡಿಕೆಯನ್ನು ಒಂದು ಗಂಟೆಯೊಳಗೆ ತಿದ್ದುಪಡಿ ಪ್ರಸ್ತಾವನೆ ಜೊತೆ ಮರಳಿ ಬರುತ್ತೇನೆ ಎಂದು ಗೃಹ ಸಚಿವರು ತಿಳಿಸಿದ್ದರು. ಈ ಮೂಲಕ ದಕ್ಷಿಣ ರಾಜ್ಯಗಳು ಸೀಟುಗಳನ್ನು ಕಳೆದುಕೊಳ್ಳುತ್ತವೆ ಎನ್ನುವುದನ್ನು ಸೃಷ್ಟಿಸಲು ಹೋಗಿದ್ದ ವಿಪಕ್ಷಗಳ ಪ್ರಯತ್ನ ವಿಫಲಗೊಂಡಿದೆ ಎಂದರು.
ಬಿಲ್ ಸೋಲಾದ ವೇಳೆ ಸದನದಲ್ಲಿ ವಿರೋಧ ಪಕ್ಷಗಳ ನಡವಳಿಕೆ, ಮಾತುಗಳು ಅವರು ಮಹಿಳಾ ವಿರೋಧಿಗಳು ಎಂಬುದನ್ನು ಸಾಬೀತುಪಡಿಸಿದೆ. ಅವರು ಮಹಿಳಾ ಪರವಾಗಿ ಇದ್ದೇವೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಕಾಂಗ್ರೆಸ್ ಇತಿಹಾಸ ನೋಡಿದರೆ ಇದು ಅವರ ಮೊದಲ ವಿರೋಧಿ ನಡೆಯಲ್ಲ, ಈ ಹಿಂದೆಯೂ ಮಹತ್ವದ ಅಧಿನಿಯಮಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ಗೆ ಮಹಿಳಾ ಪರವಾಗಿ ಇರುವಂತ ಯಾವುದೇ ನೈತಿಕತೆ ಇಲ್ಲ. ನರೇಂದ್ರ ಮೋದಿ ಉಜ್ವಲ ಯೋಜನೆ, ಜನ್‌ಧನ್ ಮೊದಲಾದ ಯೋಜನೆಗಳ ಮೂಲಕ ಈ ಹಿಂದೆಯೂ ಮಹಿಳಾ ಪರವಾಗಿ ಯೋಜನೆ ರೂಪಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ಈಗಾಗಲೇ ಶೇ.33 ಹುದ್ದೆಗಳನ್ನು ಮಹಿಳೆಯರಿಗೆ ನೀಡಲಾಗಿದೆ ಎಂದರು.ಕಾಂಗ್ರೆಸ್ ಅಭಿವೃದ್ಧಿ, ಆರ್ಥಿಕ ಏಳಿಗೆಗಳನ್ನು ಈ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದೆ. ರಾಮ ಮಂದಿರ ನಿರ್ಮಿಸಿಕಿಲ್ಲಿನ ಸಂಸ್ಕೃತಿ ಬಿಂಬಿಸಲು ಹೊರಟಾಗಲೂ ವಿರೋಧಿಸಿದೆ, ಜಿಎಸ್‌ಟಿ, ಎನ್‌ಸಿಆರ್, ತ್ರಿವಳಿ ತಲಾಕ್ ರದ್ದು, ವಕ್ಫ್ ಕಾನೂನು ಮುಂತಾದಕ್ಕೂ ವಿರೋಧಿಸಿದೆ. ಈ ಮೂಲಕ ಕಾಂಗ್ರೆಸ್ ಬಡವರ, ಯುವಜನರ, ಮಹಿಳೆಯರ ವಿರೋಧಿಯಾಗಿದೆ ಎಂದು ಚೌಟ ಆರೋಪಿಸಿದರು.