ದೇಹದಾನದ ಮೂಲಕ ಮತ್ತೊಬ್ಬರ ಬದುಕಿಗೆ ಬೆಳಕಾಗಿ: ಡಾ. ಮಹಾಂತೇಶ ರಾಮಣ್ಣವರ

KannadaprabhaNewsNetwork |  
Published : Jul 27, 2026, 02:30 AM IST
ಧಾರವಾಡದಲ್ಲಿ ನಡೆದ ದೇಹದಾನಿ ಪರಪ್ಪ ಹೂಗಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮಹಾಂತೇಶ ಬಿ. ರಾಮಣ್ಣವರ ಮಾತನಾಡಿದರು. | Kannada Prabha

ಸಾರಾಂಶ

ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನೇತ್ರದಾನ, ಚರ್ಮದಾನ ಹಾಗೂ ದೇಹದಾನಕ್ಕೆ ಸಂಕಲ್ಪ ಮಾಡುವ ಮೂಲಕ ಮರಣಾನಂತರವೂ ಇತರರ ಬದುಕಿನಲ್ಲಿ ಜೀವಂತವಾಗಿರಬಹುದು ಎಂದು ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಹೇಳಿದರು.

ಧಾರವಾಡ: ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನೇತ್ರದಾನ, ಚರ್ಮದಾನ ಹಾಗೂ ದೇಹದಾನಕ್ಕೆ ಸಂಕಲ್ಪ ಮಾಡುವ ಮೂಲಕ ಮರಣಾನಂತರವೂ ಇತರರ ಬದುಕಿನಲ್ಲಿ ಜೀವಂತವಾಗಿರಬಹುದು ಎಂದು ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಹೇಳಿದರು.

ಸಿಂಡಿಕೇಟ್ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಪರಪ್ಪ ವಿ. ಹೂಗಾರ್ ಅವರ ಶ್ರದ್ಧಾಂಜಲಿ ಸಭೆ ಹಾಗೂ ದೇಹದಾನದಲ್ಲಿ ಅವರು ಮಾತನಾಡಿ, ನೇತ್ರದಾನದಿಂದ ಇಬ್ಬರು ಅಂಧರಿಗೆ ದೃಷ್ಟಿ ದೊರೆಯುತ್ತದೆ. ಚರ್ಮದಾನದಿಂದ ಕೈಗಾರಿಕಾ ಅಪಘಾತಗಳು ಹಾಗೂ ಆಸಿಡ್ ದಾಳಿಯಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾದ ರೋಗಿಗಳ ಚಿಕಿತ್ಸೆ ಮತ್ತು ಚೇತರಿಕೆಗೆ ಹೆಚ್ಚಿನ ನೆರವು ದೊರೆಯುತ್ತದೆ ಎಂದರು.

ದೇಹದಾನದ ಪರಿಕಲ್ಪನೆ ಹೊಸದೇನಲ್ಲ. ಆದರೂ ಅನೇಕರು ಮೂಢನಂಬಿಕೆಗಳು ಹಾಗೂ ಕೆಲವು ಧಾರ್ಮಿಕ ನಂಬಿಕೆಗಳ ಕಾರಣದಿಂದ ಮರಣಾನಂತರ ದೇಹದಾನ ಮಾಡಲು ಹಿಂಜರಿಯುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

"ವೈದ್ಯಕೀಯ ವಿದ್ಯಾರ್ಥಿಗಳಿಗೆ ಶವವೇ ಮೊದಲ ಗುರು. ಆದರೆ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಶವಗಳ ಕೊರತೆ ಎದುರಾಗಿದೆ. ವೈದ್ಯಕೀಯ ಮಂಡಳಿಯ ಮಾರ್ಗಸೂಚಿಯಂತೆ ಪ್ರತಿ 25 ವಿದ್ಯಾರ್ಥಿಗಳಿಗೆ ಒಂದು ಶವ ಅಗತ್ಯವಿದೆ. ಆದ್ದರಿಂದ ದೇಹದಾನ ಮಾಡುವವರು ಮರಣಾನಂತರವೂ ವೈದ್ಯಕೀಯ ಶಿಕ್ಷಣಕ್ಕೆ ಅಮೂಲ್ಯ ಕೊಡುಗೆ ನೀಡುತ್ತಾರೆ, " ಎಂದು ಅವರು ಹೇಳಿದರು.

ದೇಹದಾನ ಮಾಡಿದ ನಂತರ ಆಸ್ಪತ್ರೆಗಳಲ್ಲಿ ಅನುಸರಿಸುವ ವಿಧಾನವನ್ನು ವಿವರಿಸಿದ ಡಾ. ರಾಮಣ್ಣವರ, ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಶವವನ್ನು ಬಳಸಿದ ಬಳಿಕ ಗೌರವಯುತವಾಗಿ ಅಂತ್ಯಸಂಸ್ಕಾರ ಅಥವಾ ಸಮಾಧಿ ನಡೆಸಲಾಗುತ್ತದೆ ಎಂದು ತಿಳಿಸಿದರು.

ಪರಪ್ಪ ವಿ. ಹೂಗಾರ್ ದೇಹದಾನ ಸಂಕಲ್ಪವನ್ನು ಕಾರ್ಯರೂಪಕ್ಕೆ ತಂದ ಅವರ ಕುಟುಂಬ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಕುಟುಂಬದ ಸದಸ್ಯರಾದ ಪ್ರೇಮಾವತಿ ಹೂಗಾರ್, ಪ್ರವೀಣ್, ಪ್ರಮೋದ್ ಹಾಗೂ ಪ್ರತಿಭಾ ಹಾಗೂ ಡಾ. ಶಿವಾನಂದ ಹುವಿನ, ಹಿರಿಯ ಪತ್ರಕರ್ತ ಲೋಚನೇಶ್ ಹುಗಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಮೇಲಿದೆ ಸಮಾಜದ ಭವಿಷ್ಯ ರೂಪಿಸುವ ಹೊಣೆ: ಡಿ.ಕೆ. ಹೊನ್ನಪ್ಪನವರ
ನರಗುಂದ ತಾಲೂಕಿನಲ್ಲಿ ಬೆಳೆ ಉಳಿಸಲು ಟ್ಯಾಂಕರ್‌ ನೀರಿನ ಮೊರೆ