ಸ್ಪೀಕರ್‌ ಕಚೇರಿ ಆರ್‌ಟಿಐ ವ್ಯಾಪ್ತಿಗೆ ತನ್ನಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork |  
Published : Oct 17, 2025, 01:01 AM IST
546645 | Kannada Prabha

ಸಾರಾಂಶ

ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಸ್ಪೀಕರ್ ಕಚೇರಿ ಮೂಲಕ ನಡೆದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೊಂದು ಸಂವಿಧಾನ ಬದ್ಧ ಪೀಠವಾಗಿದೆ. ಆದರೆ, ಈಗ ಈ ಪೀಠಕ್ಕೆ ಅಗೌರವ ತರುವ ಕಾರ್ಯಗಳು ನಡೆಯುತ್ತಿವೆ.

ಹುಬ್ಬಳ್ಳಿ:

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ನಡೆ ದಿನದಿಂದ ದಿನಕ್ಕೆ ವಿವಾದಕ್ಕೀಡಾಗುತ್ತಿದೆ. ಸ್ಪೀಕರ್ ಕಚೇರಿ ಮೂಲಕ ನಡೆದ ಕಾಮಗಾರಿಗಳಲ್ಲಿ ಹಗರಣಗಳ ವಾಸನೆ ಬರುತ್ತಿದೆ. ಈ ಕುರಿತು ಹೈಕೋರ್ಟ್‌ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾಲಮಿತಿಯಲ್ಲಿ ತನಿಖೆ ನಡೆಸಿ ವರದಿ ನೀಡಬೇಕು ಎಂದು ಮಾಜಿ ಸ್ಪೀಕರ್‌, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು. ಜತೆಗೆ ಸ್ಪೀಕರ್‌ ಕಚೇರಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಲು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಸ್ಪೀಕರ್ ಕಚೇರಿ ಮೂಲಕ ನಡೆದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೊಂದು ಸಂವಿಧಾನ ಬದ್ಧ ಪೀಠವಾಗಿದೆ. ಆದರೆ, ಈಗ ಈ ಪೀಠಕ್ಕೆ ಅಗೌರವ ತರುವ ಕಾರ್ಯಗಳು ನಡೆಯುತ್ತಿವೆ ಎಂದರು.

ಪೀಠಕ್ಕೆ ಕಳಂಕ:

ಸಂವಿಧಾನದಲ್ಲಿ ಶಾಸಕಾಂಗಕ್ಕೆ ದೊಡ್ಡ ಜವಾಬ್ದಾರಿ ಇದೆ. ಸಭಾಪತಿಗಳ ಪೀಠಕ್ಕೆ ಇರುವ ಪರಮಾಧಿಕಾರ ಇನ್ಯಾವುದಕ್ಕೂ ಇಲ್ಲ. ಇಂತಹ ಪೀಠಕ್ಕೆ ಖಾದರ ಕಳಂಕ ತರುತ್ತಿದ್ದಾರೆ. ಅವರ ನಡವಳಿಕೆಯಿಂದ ಸಂವಿಧಾನ ಬದ್ಧವಾದ ಸಭಾಧ್ಯಕ್ಷ ಸ್ಥಾನ ವಿವಾದದ ಕೇಂದ್ರವಾಗುತ್ತಿದೆ ಎಂದು ಆರೋಪಿಸಿದರು.

ದುಂದುವೆಚ್ಚ:

ಶಾಸಕರ ಭವನದ ಉನ್ನತೀಕರಣದ ಹೆಸರಿನಲ್ಲಿ ಹಾಸಿಗೆ, ದಿಂಬು, ಮಂಚ, ಸ್ಮಾರ್ಟ್ ಲಾಕರ್, ಸ್ಟೇನ್ ಲೆಸ್ ಸ್ಟೀಲ್ ಪ್ಯೂರಿಫಾಯರ್ ಹಾಗೂ ಡೋರ್ ಲಾಕರ್ ಖರೀದಿಯ ಹೆಸರಿನಲ್ಲಿ ದುಂದುವೆಚ್ಚ ಮಾಡಲಾಗುತ್ತಿದೆ. ಶಾಸಕರ ಭವನದ ಕೊಠಡಿಗಳಿಗೆ ಅಳವಡಿಸಲು ₹16 ಸಾವಿರ ಬೆಲೆ ಬಾಳುವ ಡೋರ್ ಲಾಕರ್‌ಗಳಿಗೆ ₹49 ಸಾವಿರ, ₹ 30 ಸಾವಿರಕ್ಕೆ ದೊರೆಯುವ ಸ್ಮಾರ್ಟ್ ಲಾಕರ್‌ಗಳಿಗೆ ₹ 90 ಸಾವಿರದಂತೆ ಎಲ್ಲ ವಸ್ತುಗಳಿಗೂ ಎಡ್ಮೂರು ಪಟ್ಟು ಹೆಚ್ಚು ಖರ್ಚು ಹಾಕಲಾಗಿದೆ. ಮಾರುಕಟ್ಟೆಯ ದರಕ್ಕೂ, ಇವರು ಖರೀದಿಸಿರುವ ದರಕ್ಕೂ ಅಜಗಜಾಂತರ ಅಂತರವಿದೆ. ಅದರಲ್ಲೂ ಹಣಕಾಸು ಇಲಾಖೆಯ ಅನುಮತಿ ಪಡೆಯದೇ ಇಷ್ಟೆಲ್ಲ ವೆಚ್ಚ ಮಾಡಿರುವುದನ್ನು ಗಮನಿಸಿದರೆ ಇದರಲ್ಲಿ ಮುಖ್ಯಮಂತ್ರಿಗಳೂ ಶಾಮೀಲಿರುವ ಬಗ್ಗೆ ಅನುಮಾನಗಳು ಮೂಡುತ್ತಿವೆ ಎಂದು ಆರೋಪಿಸಿದರು.

2 ವರ್ಷದ ಅವಧಿಯಲ್ಲಿ ಯು.ಟಿ. ಖಾದರ್‌ ಅವರ ನಡೆ, ಆಡಳಿತ ಶೈಲಿ ಅಕ್ಷೇಪಾರ್ಹವಾಗಿದೆ. ಸಣ್ಣದೊಂದು ಕಾರಣಕ್ಕೆ ಸ್ಪೀಕರ್‌ 2023ರಲ್ಲಿ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿದರು. ಕಳೆದ ಮಾರ್ಚ್‌ನಲ್ಲೂ 15 ಶಾಸಕರನ್ನು ಅಮಾನತು ಮಾಡಿದ್ದರು. ಆದರೆ, ಈ ರೀತಿಯ ಶಿಕ್ಷೆ ಕೊಡುವ ಅಧಿಕಾರ ಸ್ಪೀಕರ್‌ಗಿಲ್ಲ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಇಂತಹ ಹಲವು ಘಟನೆಗಳು ನಡೆದಿವೆ. ಅವರ ನಡವಳಿಕೆ ನಿಷ್ಪಕ್ಷಪಾತದಿಂದ ಕೂಡಿಲ್ಲ ಎಂದು ಆರೋಪಿಸಿದರು.

ಆರ್‌ಟಿಐ ವ್ಯಾಪ್ತಿಗೆ ಒಳಪಡಿಸಿ:

ಸ್ಪೀಕರ್‌ ಕಚೇರಿ ಕಾರ್ಯಚಟುವಟಿಕೆಗಳು ಆರ್‌ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಕಾರಣಕ್ಕೆ ದುಂದುವೆಚ್ಚದ, ಬೇಕಾಬಿಟ್ಟಿಯಾಗಿ ಕಾಮಗಾರಿಗಳು ನಡೆಯುತ್ತಿವೆ ಎಂಬ ಆಪಾದನೆಯಿದೆ. ಸ್ಪೀಕರ್ ಖಾದರ್ ಅವರು ಸಮಾವೇಶದ ಹೆಸರಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದು, ಅಗತ್ಯಕ್ಕಿಂತ ಹೆಚ್ಚು ದುಂದು ವೆಚ್ಚ ಮಾಡಿದ್ದಾರೆ. ಹೀಗಾಗಿ ಇವೆಲ್ಲ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕಾದರೆ ಸ್ಲೀಕರ್ ಕಚೇರಿಯನ್ನೂ ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನವರ ವಚನ ಸಾಹಿತ್ಯ ಯುವ ಜನತೆ ತಿಳಿಯಬೇಕು
ಮಾನವನ ಘನತೆ ಎತ್ತಿಹಿಡಿಯುವ ಹಕ್ಕುಗಳು