ಕೊಪ್ಪಳ: ನೇತ್ರದಾನದಿಂದ ದೃಷ್ಟಿಹೀನರ ಬದುಕಿಗೆ ಬೆಳಕು ಕೊಡುವ ಕೆಲಸ ಆಗುತ್ತದೆ ಎಂದು ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಮರಣಾನಂತರ ನೇತ್ರದಾನ ಮಾಡುವ ಮೂಲಕ ದೃಷ್ಟಿಹೀನರ ಬದುಕಿಗೆ ಬೆಳಕು ನೀಡಬಹುದು. ನೇತ್ರದಾನದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸತ್ತಮೇಲೂ ನಾವು ಜಗತ್ತನ್ನು ನೋಡಬೇಕು ಎಂದರೆ ಅದು ನೇತ್ರದಾನದಿಂದ ಸಾಧ್ಯ. ನೇತ್ರದಾನ ಕಾರ್ಯ ಅತ್ಯಂತ ಶ್ರೇಷ್ಠ ಎಂದರು.
ನೇತ್ರದಾನದ ಮಹತ್ವವನ್ನು ಸಾರುವ ಘೋಷಣೆಗಳನ್ನು ಕೂಗುತ್ತ ಹಾಗೂ ಜಾಗೃತಿ ಫಲಕಗಳನ್ನು ಪ್ರದರ್ಶಿಸುತ್ತ ಜಾಥಾ ಕೊಪ್ಪಳ ಗವಿಮಠ ಆವರಣದಿಂದ ಪ್ರಾರಂಭವಾಗಿ ಗಂಜ್ ಸರ್ಕಲ್ ಮುಖಾಂತರ ಹೊಸಪೇಟೆ ರಸ್ತೆಯಲ್ಲಿರುವ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಮುಕ್ತಾಯಗೊಂಡಿತು. ಈ ಕಾರ್ಯಕ್ರಮ ನೇತ್ರದಾನ ಮಾಡುವ ಕುರಿತು ಸಾರ್ವಜನಿಕರಲ್ಲಿ ಪ್ರೇರಣೆ ನೀಡಲು ಯಶಸ್ವಿಯಾಯಿತು.ಕೊಪ್ಪಳ ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಪ್ರಕಾಶ್ ಎಚ್. ಕೊಪ್ಪಳ, ನಗರದ ಪ್ರಮುಖರಾದ ಪದಮ್ ಮೆಹತಾ, ಎಂ.ಎಂ. ಜೋಶಿ ಆಸ್ಪತ್ರೆಯ ಸಿಇಒ ಕುತುಬುದ್ದೀನ್ ಮುಲ್ಲಾ, ನೇತ್ರ ತಜ್ಞ ಡಾ. ವಾಗೀಶ್ ತೆಗ್ಗಿನಕೇರಿಮಠ, ಡಾ. ಗಿರಿಜಾ ಪಾಟೀಲ್, ಶಾಖೆಯ ಮುಖ್ಯಸ್ಥ ವಿಕ್ರಮ್ ಗುಡಗೇರಿ, ಮಾರ್ಕೆಟಿಂಗ್ ವ್ಯವಸ್ಥಾಪಕ ಬಸಯ್ಯ ಹಿರೇಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.