ಮಸ್ಕಿ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶರಣರ ವಚನಗಳನ್ನು ಪ್ರಸಾರ ಮಾಡುವ ಮತ್ತು ಶರಣರ ಬದುಕಿನ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಸುತ್ತೂರು ಮಠದ ಪೂಜ್ಯರು ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ನಿರಂತರವಾಗಿ ಚಟುವಟಿಕೆ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಮಸ್ಕಿ ನಾಗರಾಜ ವಕೀಲರು ಹೇಳಿದರು.
ಶಿಕ್ಷಕ ಮಂಜುನಾಥ ಪೂಜಾರ ಮಾತನಾಡಿ, 12ನೇ ಶತಮಾನದ ಶಿವಶರಣರ ವಚನಗಳು ಅರಿವಿನ ಕಿರಣಗಳಾಗಿದ್ದು, ಅದರಲ್ಲೂ ಅಲ್ಲಮ ಪ್ರಭುಗಳು ಅನುಭವ ಮಂಟಪದ ಅಧ್ಯಕ್ಷರಾಗಿ ಬೆಡಗಿನ ವಚನಗಳ ಮೂಲಕ ಪ್ರಾಂಪಚಿಕ ಮತ್ತು ಆಧ್ಯಾತ್ಮಿಕ ಜೀವನಕ್ಕೆ ಬೆಳಕು ನೀಡಿದ್ದಾರೆ ಎಂದು ಹೇಳಿದರು.
ಅಲ್ಲಮಪ್ರಭುಗಳು ಆಕಾರಗಳನ್ನು ನಿರಾಕರಿಸುತ್ತಲೆ ಆಧ್ಯಾತ್ಮದ ತುತ್ತತುದಿಗೆ ಏರಿದ ಮಹಾಜ್ಞಾನಿಯಾಗಿದ್ದರು. ಅಂತರಂಗದ ಆಳಕ್ಕಿಳಿದು ಆಧ್ಯಾತ್ಮದ ಉನ್ನತಿ ಸ್ಥಿತಿ ತಲುಪುವ ಕಲೆ ಸಿದ್ದಿಸಿತ್ತು ಎಂದು ಅಲ್ಲಮಪ್ರಭುಗಳ ವಚನಗಳನ್ನು ವಿಶ್ಲೇಶಣೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ವೀರೇಶ ಸೌದ್ರಿ ವಹಿಸಿದ್ದರು. ಮಸ್ಕಿ ತಾಲೂಕು ನೌಕರರ ಸಂಘದ ತಾಲೂಕು ಅಧ್ಯಕ್ಷ ಶಂಕರಗೌಡ ಕರಡಕಲ್, ಅಭಿನಂದನ್ ಸ್ಫೂರ್ತಿಧಾಮದ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಮಾತನಾಡಿದರು. ಪ್ರಥಮ ದರ್ಜೆ ಗುತ್ತೇದಾರ ಎಂ.ಪ್ರಭುದೇವ ಉಪಸ್ಥಿತರಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶಿಕ್ಷಕ ಮಹಾಂತೇಶ ಕಾರ್ಯಕ್ರಮ ನಿರ್ವಹಿಸಿದರು.