ಮಲ್ಲಯ್ಯ ಪೋಲಂಪಲ್ಲಿ
ನಗರದ ಪ್ರಮುಖ ವೃತ್ತಗಳಲ್ಲಿ ಜನನಿಬಿಡ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದಲ್ಲಿ, ಅಪರಾಧ ಪ್ರಕರಣ, ಅಪಘಾತ, ಇನ್ನಿತರ ಸಾಕ್ಷಿಗಾಗಿ ಬಳಕೆ ಮಾಡಿಕೊಳ್ಳಬಹುದು. ಆದರೆ, ನಗರದಲ್ಲಿ ನಿರ್ವಹಣೆ ಕೊರತೆಯಿಂದ ಸಿಸಿಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗದೇ ಎರಡು ವರ್ಷದಿಂದ ಕಣ್ಣುಮುಚ್ಚಿವೆ.
ನಗರದ ಪ್ರಮುಖ ವೃತ್ತ ಹಾಗೂ ಜನನಿಬಿಡ ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದೆ 2 ವರ್ಷಗಳಿಂದ ಧೂಳು ತಿನ್ನುತ್ತಿವೆ. ಕೇವಲ ತೋರಿಕೆಗೆ ಮಾತ್ರ ಸಿಸಿಟಿ ಎಂಬಂತಿವೆ.ಅಕ್ರಮ ಚಟುವಟಿಕೆ, ಅಪರಾಧ, ಅಪಘಾತ ಹಾಗೂ ಮಹಿಳೆಯರ ದೌರ್ಜನ್ಯಗಳ ಪ್ರಕರಣಗಳಿಗೆ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ನಗರಸಭೆ ಹಾಗೂ ಪೊಲೀಸ್ ಇಲಾಖೆಯ ನಿಷ್ಕಾಳಜಿಗೆ ಸಾಕ್ಷಿಯಾಗಿದೆ. ಕಾನೂನು ಸುರಕ್ಷತೆಗಾಗಿ ಕೂಡಲೇ ನಗರದಲ್ಲಿ ಕೆಟ್ಟು ನಿಂತ ಸಿಸಿ ಕ್ಯಾಮೆರಾ ಗಳನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇವು ಸುಮಾರು 2 ವರ್ಷಗಳ ಹಿಂದೆ ಕೆಟ್ಟು ನಿಂತಿವೆ. ಸಾರ್ವಜನಿಕರು ಸಿಸಿ ಕ್ಯಾಮೆರಾಗಳನ್ನು ದುರಸ್ತಿ ಮಾಡುವಂತೆ ಅನೇಕ ಬಾರಿ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಗರಸಭೆ ಹಾಗೂ ಪೊಲೀಸ್ ಇಲಾಖೆ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಸಚಿವರ ಸ್ವಕ್ಷೇತ್ರದಲ್ಲಿ ಸಿಸಿ ಕ್ಯಾಮೆರಾಗಳು ಕೆಟ್ಟು ನಿಂತರೂ ದುರಸ್ತಿಗೆ ಕ್ರಮ ವಹಿಸದೆ ಇರುವುದು ಆಚ್ಚರಿಗೆ ಕಾರಣವಾಗಿದೆ.
ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು: ನಗರದ ದರ್ಶನಾಪುರ ಶಿಶು ಆಸ್ಪತ್ರೆ ಪಕ್ಕದಲ್ಲಿರುವ ಗೋಲಗೇರಿ ತೆಂಗಿನಕಾಯಿ ವ್ಯಾಪಾರಿಯ ಅಂಗಡಿಯಲ್ಲಿ ಕಳೆದ ಎರಡು ವರ್ಷದ ಹಿಂದೆ 4 ಲಕ್ಷ ರು.ಗಳಿಗೂ ಅಧಿಕ ನಗದು ಕಳ್ಳತನ ವಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಳ್ಳನ ಮುಖ ಚಹರೆ ಸೆರೆಯಾಗಿದ್ದರೂ ಇನ್ನು ಪೊಲೀಸರಿಗೆ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ ಇತ್ತೀಚೆಗೆ ಪಡಿತರ ಅಕ್ಕಿ ತುಂಬಿದ ಲಾರಿ ಕಳ್ಳತನ ನಡೆದಿದೆ. ಅಲ್ಲದೆ ಎಕ್ಸಿಸ್ ಬ್ಯಾಂಕಿನ ಎಟಿಎಂ ಹಾಗೂ ಗ್ಯಾರೇಜ್ ಲೈನನಲ್ಲಿ ಸರಣಿ ಅಂಗಡಿ ಕಳ್ಳತನ, ಮನೆ ಕಳ್ಳತನ, ಬೈಕ್ ಕಳ್ಳತನದಂತಹ ಪ್ರಕರಣಗಳು ವರದಿಯಾಗಿವೆ.
ಪೋಲಿಸ್ ಇಲಾಖೆ ಹೇಳುವುದೇ ಬೇರೆ: ನಗರದಲ್ಲಿ ಅಪರಾಧ ಪ್ರಕರಣಗಳು ಪತ್ತೆಹಚ್ಚಲು ಸಿಸಿ ಕ್ಯಾಮೆರಾಗಳು ಸಹಕಾರಿ ಆಗುತ್ತೇವೆ ಎನ್ನುವ ಉದ್ದೇಶದಿಂದ ಕೆಟ್ಟು ನಿಂತ ಕ್ಯಾಮೆರಾಗಳನ್ನು ಕೂಡಲೇ ದುರಸ್ತಿ ಮಾಡುವಂತೆ ನಗರಸಭೆಗೆ ಐದಾರು ಪತ್ರಗಳನ್ನು ಬರೆದಿದ್ದೇವೆ. ಪೌರಾಯುಕ್ತರಿಗೆ ಅನೇಕ ಬಾರಿ ಮೌಖಿಕವಾಗಿ ಹಾಗೂ ಖುದ್ದಾಗಿ ಭೇಟಿ ಮಾಡಿ ಕೂಡಲೆ ಕ್ಯಾಮೆರಾ ದುರಸ್ತಿ ಮಾಡುವಂತೆ ಹೇಳಿದರೂ ಸ್ಪಂದಿಸಿಲ್ಲ. ಇದಲ್ಲದೆ ಸಚಿವರ ಗಮನಕ್ಕೂ ತರಲಾಗಿದೆ. ಅಲ್ಲದೆ ಸಿಸಿಟಿವಿ ಆಪರೇಟರಗೆ ಆರೇಳು ತಿಂಗಳ ಮೊದಲೇ ನನ್ನ ಸ್ವಂತ ಹಣ 50 ಸಾವಿರ ರು.ಗಳು ನೀಡಿ ಕ್ಯಾಮೆರಾ ದುರಸ್ತಿ ಮಾಡಲು ಹೇಳಿದ್ದೆ. ಆದರೆ, ನಗರಸಭೆ ಅಧಿಕಾರಿಗಳು ಆ ವ್ಯಕ್ತಿಗೆ ದುರಸ್ತಿ ಮಾಡಬೇಡ ಎಂದು ಹೇಳಿದ್ದಾರೆಂದು ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಪಾಟೀಲ್ ತಿಳಿಸಿದ್ದಾರೆ.ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಿಸಿ ಕ್ಯಾಮೆರಾಗಳನ್ನು ದುರಸ್ತಿ ಮಾಡುವಂತೆ ನಗರಸಭೆಗೆ ಸೂಚಿಸಿದ್ದೇನೆ. ಆದಷ್ಟು ಬೇಗ ದುರಸ್ತಿ ಮಾಡುವ ವ್ಯವಸ್ಥೆ ಮಾಡುತ್ತೇನೆ.
- ರಮೇಶ್ ಬಡಿಗೇರ್, ಪೌರಾಯುಕ್ತರು ನಗರಸಭೆ ಶಹಾಪುರ.