‘ಆಪರೇಷನ್ ಸಿಂದೂರ್‌’ನಲ್ಲಿ ಪಾಲ್ಗೊಂಡ ಬಿಎಸ್‌ಎಫ್‌ ಯೋಧ ನಿವೃತ್ತಿ; ತವರಿನಲ್ಲಿ ಗೌರವಾರ್ಪಣೆ

KannadaprabhaNewsNetwork |  
Published : Jul 04, 2025, 11:49 PM IST
ಫೋಟೋ: ೪ಪಿಟಿಆರ್-ಯೋಧಭಾರತೀಯ ಸೇನಾ ನಿವೃತ್ತ ಯೋಧ ಪದ್ಮನಾಭ ಗೌಡರಿಗೆ ಗೌರವಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಗಡಿ ಭದ್ರತಾ ಪಡೆಯಲ್ಲಿ ನಾಲ್ಕು ದಶಕಗಳ ಕಾಲ ಕರ್ತವ್ಯ ನಿವೃತ್ತರಾಗಿ ಹುಟ್ಟೂರು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಸೊರಂಜ ಎಂಬಲ್ಲಿ ಆಗಮಿಸುತ್ತಿದ್ದ ಪದ್ಮನಾಭ ಗೌಡ ಸೊರಂಜ ಅವರಿಗೆ ಗುರುವಾರ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಗೌರವಾರ್ಪಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಭಾರತೀಯ ಸೇನೆಯಲ್ಲಿ ೪೦ ವರ್ಷ ೧ ತಿಂಗಳು ೨೨ ದಿನಗಳ ಕಾಲ ಸೇವೆ ಸಲ್ಲಿಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋ) ಪದ್ಮನಾಭ ಗೌಡ ಸೊರಂಜ ಅವರು ‘ಆಪರೇಷನ್ ಸಿಂದೂರ್‌’ ಕಾರ್ಯಾಚರಣೆ ಬಳಿಕ ಜೂ.೩೦ರಂದು ನಿವೃತ್ತಿ ಹೊಂದಿದ್ದಾರೆ. ಕರ್ತವ್ಯ ನಿವೃತ್ತರಾಗಿ ಹುಟ್ಟೂರು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಸೊರಂಜ ಎಂಬಲ್ಲಿ ಆಗಮಿಸುತ್ತಿದ್ದ ಪದ್ಮನಾಭ ಗೌಡ ಸೊರಂಜ ಅವರಿಗೆ ಗುರುವಾರ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ವತಿಯಿಂದ ಗೌರವಾರ್ಪಣೆಯೊಂದಿಗೆ ಸ್ವಾಗತ ಕೋರಲಾಯಿತು.

ಈ ಸಂದರ್ಭ ಮಾತನಾಡಿದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ದೇಶದ ಗಡಿ ಕಾಯುವ ಸೈನಿಕರೇ ನಮಗೆ ಶ್ರೀರಕ್ಷೆ. ಅವರಿಲ್ಲದೇ ಇದ್ದರೆ ನಾವಿಂದು ಇಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿರಲಿಲ್ಲ ಆಪರೇಷನ್ ಸಿಂದೂರದಲ್ಲಿ ಪಾಲ್ಗೊಂಡು ನಮ್ಮ ದೇಶಕ್ಕೆ ಮತ್ತು ಜಿಲ್ಲೆಗೆ ಹೆಮ್ಮೆ ತಂದಿರುವ ಪದ್ಮನಾಭ ಗೌಡರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಜೊಸೆಫ್ ಪಿ.ಚೆರಿಯನ್, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿದರು.

ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಉದ್ಯಮಿ ಮಿತ್ರಂಪಾಡಿ ಪುರಂದರ ರೈ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್, ಕೂಡುರಸ್ತೆ ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ, ಯೋಧ ಪದ್ಮನಾಭ ಗೌಡರವರ ಪತ್ನಿ ಸುಶೀಲಾ, ಮತ್ತಿತರರು ಉಪಸ್ಥಿತರಿದ್ದರು.

ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿ, ನಿರೂಪಿಸಿದರು. ಕೆದಂಬಾಡಿ ಗ್ರಾ.ಪಂ. ಸದಸ್ಯ, ವರ್ತಕರ ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ವಂದಿಸಿದರು. ಕರಾವಳಿ ಕರ್ನಾಟಕ ನಿವೃತ್ತ ಬಿಎಸ್‌ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ವಿದೀಪ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿದ್ದರು.

೧೯೮೫ ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದ ಪದ್ಮನಾಭಗೌಡ ಭಾರತದ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಗೆ ಸೇರ್ಪಡೆಗೊಂಡು ಗಡಿ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ೧೩ ವರ್ಷ, ಪಂಜಾಬ್-ಪಾಕ್ ಗಡಿ ಪ್ರದೇಶ, ಬಾಂಗ್ಲಾ-ಭಾರತ ಗಡಿ, ಭಾರತ-ಪಾಕ್ ಗಡಿ ಹೀಗೆ ಭಾರತರ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಬಡತನ ನಿರ್ಮೂಲನೆಗೆ ಸಂಜೀವಿನಿ ಸಹಕಾರಿ
ರೈತರು ಸರ್ಕಾರದ ಸೌಕರ್ಯ ಪಡೆಯಲು ಎಫ್‌ಐಡಿ ಮಾಡಿಸಲಿ: ಚೇತನಾ ಪಾಟೀಲ