ಕನ್ನಡಪ್ರಭ ವಾರ್ತೆ ಚಿತ್ರದುರ್ಗ:
ಕೋಟೆನಾಡಿನಲ್ಲಿ ಶನಿವಾರ ನಡೆದ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿಯಾಗಿ ಅವರು ಮಠ ಮಾನ್ಯಗಳಿಗೆ ನೀಡಿದ ಕೊಡುಗೆ ಹಾಗೂ ಅವರ ಉದಾರ ಭಾವವನ್ನು ಗುಣಗಾನ ಮಾಡಿದರು. ಯಡಿಯೂರಪ್ಪನವರು ಪುರಸಭೆ ಸದಸ್ಯತ್ವದಿಂದ ರಾಜ್ಯದ ಮುಖ್ಯಮಂತ್ರಿವರೆಗೆ ಬೆಳೆದು, ಯಾರೂ ಮಾಡದ ಅದ್ಭುತ ಕಾರ್ಯ ಮಾಡಿ ಎಲ್ಲ ಜಾತಿ-ಜನಾಂಗಗಳ ಪ್ರೀತಿ ಗಳಿಸಿದವರು. 4 ಬಾರಿ ಮುಖ್ಯಮಂತ್ರಿಗಳಾಗಿ ವಿಶೇಷ ದಾಖಲೆ ಮಾಡಿದ್ದಾರೆ. ಜನ ಸಾಮಾನ್ಯರ ಧ್ವನಿಗೆ ಸ್ಪಂದಿಸಿ, ಬಡವರ ಭಾವನೆ ಆಲಿಸಿ ರೈತರ ಕಷ್ಟ ಸುಖ ಅರಿತು ಸ್ಪಂದಿಸಿ ಬೆಳೆದು ಬಂದವರು. ಅವರು ಮಾಡಿದ ಕಾರ್ಯಗಳಿಂದ ಪ್ರಭಾವಿತರಾಗಿ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿದೆ. ಇದೊಂದು ಸಾರ್ಥಕ ಸಮಾವೇಶವಾಗಿದೆ ಎಂದರು.
ಸಾಗರದ ಅಲೆಯಂತೆ ಬಂದಿರುವ ಈ ಜನಸಾಗರ ಚಿತ್ರದುರ್ಗದ ಈ ಬಯಲು ಕರ್ನಾಟಕದ ಸಮಸ್ತ ಸಮಾವೇಶಕ್ಕೆ ಸಾಕ್ಷಿಯಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಸೇವೆ ಅನನ್ಯವಾದುದು ಎಂದು ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಾಡಿನ ಆರ್ಥಿಕ ಸಮೃದ್ಧಿ ಹಾಗೂ ನಾಡಿನ ಜನಸೇವೆಗೆ ಅವರು ಅವಿರತ ಶ್ರಮಸಿದ್ದಾರೆ. ಮಿತ ಬಳಕೆಯಾಗಿ ಮಾತನಾಡುವ ಅವರು ದೀನದಲಿತರ ನೋವನ್ನು ಪರಿಹರಿಸಿದರು. ಅಂತಹ ಅವರ ಈ ಅಭಿನಂದನಾ ಸಮಾರಂಭದಲ್ಲಿ ನಾವು ಭಾಗವಹಿಸಿರುವುದು ಅತೀವ ಸಂತಸ ತಂದಿದೆ ಎಂದರು.