)
ಉಡುಪಿ: ಕರಾವಳಿ ಅದರಲ್ಲೂ ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ತೀವ್ರ ನಿರ್ಲಕ್ಷ್ಯ, ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ ಬಜೆಟ್‌ನಲ್ಲಿಯೂ ಮುಂದುವರಿದಿದೆ. ಬಜೆಟ್ಟಿನಲ್ಲಿ ಉಡುಪಿ ಜಿಲ್ಲೆಗಂತಲೇ ಒಂದೂ ಯೋಜನೆ ಇಲ್ಲ, ಇದು ಕೂಡ ಒಂದು ದಾಖಲೆಯಾಗಿದೆ !
ಉಡುಪಿ ಜಿಲ್ಲೆಯೂ ಸೇರಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮೀನು ಮಾರುಕಟ್ಟೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ, ಆದರೆ ಎಷ್ಟು ಮಾರುಕಟ್ಟೆಗಳು, ಅನುದಾನ ಎಷ್ಟು ಎಂದು ತಿಳಿಸಿಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಜೊತೆಗೆ ಕೊಲ್ಲೂರು ಮುಕಾಂಬಿಕಾ ದೇವಾಲಯದ ಅಭಿವೃದ್ಧಿಗೂ ಪ್ರಾಧಿಕಾರ ರಚಿಸುವುದಾಗಿ ಘೋಷಿಸಿದ್ದು, ಕೊಲ್ಲೂರು ಕ್ಷೇತ್ರದಲ್ಲಿರುವ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಇದು ಆಶಾದಾಯಕ ಘೋಷಣೆಯಾಗಿದೆ. ಉಳಿದಂತೆ ಮೀನುಗಾರರಿಗೆ ಉಚಿತವಾಗಿ ನೀಡಲಾಗುವ ಸಲಕರಣೆಯ ಕಿಟ್‌ಗಳ ಮೌಲ್ಯವನ್ನು10 ಸಾವಿರ ರು. ನಿಂದ 20 ಸಾವಿರ ರು.ಗೆ ಹೆಚ್ಚಿಸಲಾಗಿದೆ. ಮೀನುಗಾರಿಕಾ ಕೊಂಡಿ ರಸ್ತೆಗಳ ಅಭಿವೃದ್ಧಿಗೆ 20 ಕೋಟಿ ರು. ಘೋಷಿಸಲಾಗಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು 300 ಫುಟ್ ಬ್ರಿಡ್ಜ್‌ಗಳ ನಿರ್ಮಾಣ ಮಾಡುವುದಾಗಿ ಪ್ರಕಟಿಸಲಾಗಿದೆ, ಆದರೆ ಈ 3 ಯೋಜನೆಗಳಲ್ಲಿ ಉಡುಪಿ ಜಿಲ್ಲೆಗೆಷ್ಟು ಪಾಲು ಸಿಗಲಿದೆ ಗೊತ್ತಿಲ್ಲ.
ಕರಾವಳಿಯಲ್ಲಿ ವಿಫುಲ ಅವಕಾಶ ಇರುವ, ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿ ಸಿಎಂ ಬಜೆಟ್ಟಿನಲ್ಲಿ ಹೇಳಿದ್ದಾರೆ, ಕಳೆದ ಅನೇಕ ಬಜೆಟ್‌ಗಳಲ್ಲಿ ಇದು ಚರ್ವಿತ ಚರ್ವಣ ಘೋಷಣೆಯಾಗಿರುವುದರಿಂದ ಮತ್ತು ಈ ಯೋಜನೆಗೆ ಅನುದಾನ ಅಥವಾ ಕಾಲಮಿತಿಯನ್ನು ನಿರ್ಧರಿಸಿಲ್ಲವಾದ್ದರಿಂದ, ಈ ಘೋಷಣೆ ಮುಂದಿನ ಅನೇಕ ಬಜೆಟ್‌ಗಳಲ್ಲಿ ಪುನಾರವರ್ತನೆಯಾದರೇ ಅಚ್ಚರಿ ಇಲ್ಲ.