ಮುಳಗುಂದ: ಉತ್ತರ ಕರ್ನಾಟಕದ ಹತ್ತಾರು ಹಳ್ಳಗಳು ಸೇರಿ ಹರಿಯುವ ಬೆಣ್ಣೆ ಹಳ್ಳದ ನೀರಿನಿಂದ ಪ್ರತಿವರ್ಷ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗುತ್ತಿದ್ದು, ಸರಕಾರ ಬೆಣ್ಣೆ ಹಳ್ಳಕ್ಕೆ ಬ್ಯಾರೇಜ್ ನಿರ್ಮಿಸುವ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ ಆಗ್ರಹಿಸಿದರು.
ಬೆಣ್ಣೆ ಹಳ್ಳದ ಪ್ರವಾಹ ಸೇರಿದಂತೆ ಅತೀವೃಷ್ಟಿಯಿಂದಾಗಿ ಬೆಳೆ ಹಾನಿಯಾದ ರೈತರಿಗೆ ಸರಕಾರ ಪರಿಹಾರ ಸೇರಿದಂತೆ, ಬೆಳೆವಿಮೆಯ ಹಣವನ್ನು ಕೂಡಲೇ ನೀಡಬೇಕು ಎಂದರು.
ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ರೈತರಿಗೆ ಅಗತ್ಯವಾಗಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಸಬೇಕು. ಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದು, ಸಿಎಂ ಸಿದ್ದರಾಮಯ್ಯ ರಸಗೊಬ್ಬರ ಕೊರತೆ ಇದೆ ಎಂದು ಕೇಂದ್ರ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರೆ, ರಾಜ್ಯ ಸಚಿವ ಚಲುವರಾಯಸ್ವಾಮಿ ಅವರು ರಾಜ್ಯದಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದೆ ಎಂದು ಹೇಳುತ್ತಾರೆ. ಇವರಿಬ್ಬರ ನಡುವೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ರಾಜ್ಯ ಸರಕಾರ ರೈತರಿಗೆ ಅಗತ್ಯವಿರುವ ಗೊಬ್ಬರ ವಿತರಿಸಬೇಕು ಎಂದು ಒತ್ತಾಯಿಸಿದರು.ಉಪಾಧ್ಯಕ್ಷ ರಾಮಣ್ಣ ಕಮ್ಮಾರ ಮಾತನಾಡಿ, ಸೊರಟೂರು ಸೇರಿದಂತೆ ಗದಗ ಜಿಲ್ಲೆಯಲ್ಲಿರುವ ಬಗರಹುಕುಂ ಸಾಗುವಳಿದಾರರಿಗೆ ಜಮೀನು ಹಕ್ಕುಪತ್ರ ನೀಡಬೇಕು ಎಂದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಎಂ. ವಡ್ಡರ, ಭದ್ರೇಶ ಕುಸ್ಲಾಪೂರ, ಬೂದಪ್ಪ ಹಳ್ಳಿ, ಚನ್ನವೀರಯ್ಯ ಹೊಸಮಠ, ಶಿವಜೋಗಯ್ಯ ಹಿರೇಮಠ, ಯಲ್ಲಪ್ಪ ಅಡ್ನೂರ, ಮಂಜುನಾಥಸ್ವಾಮಿ ಹಿರೇಮಠ, ಫಕ್ಕೀರೇಶ ಸುಗ್ರಿ, ವೀರೇಶ ಮಾಂಡ್ರೆ, ಮಂಜಣ್ಣ ಬುರ್ಲಿ, ಮುತ್ತಪ್ಪ ಹಟ್ಟಿ, ಮಹಾಂತೇಶ ಹಳ್ಳಿ, ಮಾರುತಿ ಹುಲಿಕಟ್ಟಿ, ವೀರಣ್ಣ ಗುಗ್ಗರಿ, ಹನಮಂತಪ್ಪ ಘೋಡಕೆ, ಕನಕಪ್ಪ ಬೇಗೂರ, ಫಕ್ಕೀರಪ್ಪ ತೋಪಿನ, ಮಲಕಾಜಪ್ಪ ಗಿಡ್ಡಕೆಂಚಣ್ಣವರ, ಪರಶುರಾಮ ಹೂಗಾರ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.