ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೆರೆ ಏರಿಗೆ ತಡೆಗೋಡೆ ಇಲ್ಲ
ಏರಿಗಳ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.ಆದರೆ ಕೆರೆ ಏರಿಗಳ ಮೇಲೆ ತಡೆಗೋಡೆ ನಿರ್ಮಾಣ ಮಾಡದೆ ಕಡೆಗಣಿಸಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಪೊಲೀಸ್ ಇಲಾಖೆ ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಆಂದೋಲನ ಕಾರ‍್ಯಕ್ರಮ ನಡೆಸಿ ವಾಹನ ಸವಾರರಲ್ಲಿ ರಸ್ತೆಯಲ್ಲಿ ಹೇಗೆ ವಾಹನ ಚಲಾಯಿಸಬೇಕೆಂದು ಜಾಗೃತಿ ಮೂಡಿಸುತ್ತದೆ. ಆದರೆ ರಸ್ತೆ ಬದಿಗಳಲ್ಲಿ ಹಾಗೂ ಕೆರೆಗಳ ಏರಿಗಳ ಮೇಲೆ ವಾಹನಗಳಿಗೆ ಸುರಕ್ಷತೆ ಇಲ್ಲ ಮತ್ತು ಅಪಾಯದ ಬಗ್ಗೆ ಸೂಚನಾ ಫಲಕಗಳೂ ಸಹ ಅಳವಡಿಸಿಲ್ಲ.ತಾಲೂಕಿನಲ್ಲಿರುವ ಬಹುತೇಕ ಕೆರೆಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಇಂತಹ ಕೆರೆಗಳ ಏರಿಗಳ ಮೇಲೆ ಸಂಚರಿಸುವ ವಾಹನಗಳು ಒಂದಲ್ಲಾ ಒಂದು ರೀತಿ ಅವಘಡಕ್ಕೆ ಸಿಲುಕುವಂತಾಗಿದೆ. ತಾಲೂಕಿನ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಮುಷ್ಟ್ರಹಳ್ಳಿ ಕೆರೆ ಆಂಧ್ರದ ಕುಪ್ಪಂ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಕೆರೆ ಮೇಲೆಯೇ ನೂರಾರು ವಾಹನಗಳು ಹಾದು ಹೋಗಬೇಕು, ಆದರೆ ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಾಹನ ಚಾಲಕರ ಆರೋಪ.ಎಚ್ಚರಿಕೆಯ ಫಲಕಗಳೂ ಇಲ್ಲ
ಅಲ್ಲದೆ ಮುಷ್ಟ್ರಹಳ್ಳಿ ಕೆರೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ, ಇಲ್ಲಿಗೆ ಆಂಧ್ರ ಮತ್ತು ಕೋಲಾರ ಜಿಲ್ಲೆಯವರು ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಕೆರೆಯ ಸುತ್ತಲೂ ತಡೆಗೋಡೆ ಇಲ್ಲ. ಸರ್ಕಾರ ಇನ್ನಾದರೂ ಮುನ್ನೆಚ್ಚರಿಕೆವಹಿಸಿ ತಾಲೂಕಿನ ಎಲ್ಲ ಕೆರೆಗಳ ಏರಿಗಳಿಗೆ ತಡೆಗೋಡೆ ನಿರ್ಮಾಣ ಮಾಡಿ ಜನರ ಪ್ರಾಣ ಉಳಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.